ಸರ್ಕಾರಿ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಜವಾಬ್ದಾರಿ

mkg1
Published on

ಚನ್ನಗಿರಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದರೆ ತೊಂದರೆ ಅಗುವುದು ಶಿಕ್ಷಕರಿಗೆ. ಆದ್ದರಿಂದ ಶಿಕ್ಷಕರು, ಸರ್ಕಾರ ಎಲ್ಲ ಸೌಕರ್ಯ ಒದಗಿಸಿದರೂ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಕಾರಣ ಕಂಡುಕೊಂಡು ಅದನ್ನು ಸರಿಪಡಿಸಿ ಸರ್ಕಾರಿ ಶಾಲೆ ಬೆಳೆಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಶಾಸಕ ಶಿವಗಂಗಾ ಬಸವರಾಜ್ ತಿಳಿಸಿದರು.

ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಸಹಯೋಗದಲ್ಲಿ ನಡೆದ 10ನೇ ತರಗತಿಯಲ್ಲಿ ಶೇ. ನೂರರಷ್ಟು ಫಲಿತಾಂಶ ಪಡೆದ ಶಾಲೆ ಮುಖ್ಯಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆ ಆಗುತ್ತಿದ್ದಂತೆ ಶಿಕ್ಷಣ ಇಲಾಖೆ ತಕ್ಷಣ ಶಾಲೆಯಲ್ಲಿನ ಹೆಚ್ಚುವರಿ ಶಿಕ್ಷಕರನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡುತ್ತದೆ. ಇನ್ನೂ ಕಡಿಮೆಯಾದರೆೆ ಶಾಲೆ ಮುಚ್ಚುತ್ತದೆ. ಅದೇ ಮುಂದುವರಿದಲ್ಲಿ ಮುಂದೊಂದು ದಿನ ಹೆಚ್ಚುವರಿ ಶಿಕ್ಷಕರಿಗೆ ವೇತನ ನೀಡಲು ಆಗದೆ ಸ್ವಯಂ ನಿವೃತ್ತಿ ತೆಗೆದುಕೊಳ್ಳುವಂತೆ ಸೂಚಿಸುವ ದಿನ ಬರಬಹುದು ಎಂದು ಎಚ್ಚರಿಸಿದರು.

ನಾನು ಶಿಕ್ಷಣ, ರೈತರು ಮತ್ತು ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ಈಗಾಗಲೇ ತಾಲೂಕಿನ ಕೋಗಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಸ್ಮಾರ್ಟ್ ಕ್ಲಾಸ್ ಮಂಜೂರು ಮಾಡಿಸಿದ್ದೇನೆ. ಮುಂದಿನ ದಿನದಲ್ಲಿ ಎಲ್ಲ ಶಾಲೆಗಳಿಗೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜಯಪ್ರಕಾಶ್ ಮಾತನಾಡಿ, ಸರ್ಕಾರಿ ಶಾಲೆಯಂತೆ ಅನುದಾನಿತ ಶಾಲೆಗಳಿಗೆ ಸ್ಮಾರ್ಟ್‌ಕ್ಲಾಸ್ ನೀಡಬೇಕು ಮತ್ತು ಶಿಕ್ಷಕರ ಭವನ ನಿರ್ಮಾಣಕ್ಕಾಗಿ 4 ಕೋಟಿ ರೂ. ಅನುದಾನ ಮಂಜೂರು ಆಗಿದೆ. ಕಟ್ಟಡ ನಿರ್ಮಾಣದ ಕಾಮಗಾರಿ ನಡೆಸಿ ಪೂರ್ಣಗೊಳಿಸಿಕೊಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ಕಾರ್ಯಕ್ರಮಗಳನ್ನು ಖಾಸಗಿ ಕಟ್ಟಡದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶೇ. ನೂರರಷ್ಟು ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಸ್. ಶಂಕರಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪಿ.ವಿ. ಸ್ವಾಮಿ, ಕಾರ್ಯದರ್ಶಿ ಕಾಂತರಾಜ್, ರಾಮಚಂದ್ರಪ್ಪ, ಶಂಕರಗೌಡ ಇದ್ದರು.

ಸಿಎಚ್‌ಎನ್ 01 _ಸನ್ಮಾನ. 01 ಅಗಸ್ಟ್
ಚನ್ನಗಿರಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. ನೂರರಷ್ಟು ಫಲಿತಾಂಶ ಪಡೆದ ಶಾಲೆ ಮುಖ್ಯಶಿಕ್ಷಕರಿಗೆ ಶಾಸಕ ಶಿವಗಂಗಾ ಬಸವರಾಜ್ ಸನ್ಮಾನಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಸ್. ಶಂಕರಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪಿ.ವಿ. ಸ್ವಾಮಿ. ಕಾರ್ಯದರ್ಶಿ ಕಾಂತರಾಜ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net