ಗೌರವಯುತ ಬದುಕು ಕಟ್ಟಿಕೊಳ್ಳಿ

13SDT1-Web
ಸವದತ್ತಿ ಗಂಗಾಶಂಕರ ಕಲ್ಯಾಣ ಮಂಟಪದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಉದ್ಘಾಟಿಸಿದರು. ಪ್ರಶಾಂತ ಪಾಟೀಲ, ಯಶವಂತಕುಮಾರ, ರಾಜಶೇಖರ ಕಾರದಗಿ, ದೀಪಕ ಜಾನ್ವೇಕರ, ಪ್ರಕಾಶ ಚನ್ನಪ್ಪನವರ ಮತ್ತಿತರರು ಉಪಸ್ಥಿತರಿದ್ದರು.
Published on

ಸವದತ್ತಿ: ಅಲೆಮಾರಿ ಜನಾಂಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಜನಾಂಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ತಾಲೂಕಿನಲ್ಲಿ ಆಶ್ರಮ ಶಾಲೆ ಆರಂಭಿಸಲಾಗುವುದು ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದ್ದಾರೆ.

ಪಟ್ಟಣದ ಗಂಗಾಶಂಕರ ಕಲ್ಯಾಣ ಮಂಟಪದ ಸಭಾಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ, ಸಮುದಾಯದಲ್ಲಿರುವ ಮೂಢನಂಬಿಕೆ ಹೋಗಲಾಡಿಸಲು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ದಿ.ದೇವರಾಜ ಅರಸರ ಸೇವೆ ಅಪಾರ. ಮಕ್ಕಳ ಶಿಕ್ಷಣಕ್ಕಾಗಿ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ವಿಶೇಷ ಪ್ರೋತ್ಸಾಹ ಧನ, ಶಿಷ್ಯ ವೇತನ, ವಿದ್ಯಾಸಿರಿ, ಶಿಕ್ಷಣ ಸಾಲ ಸೇರಿ ಹತ್ತಾರು ಸೌಲಭ್ಯ ಕಲ್ಪಿಸಲಾಗುತ್ತಿದೆ. ಸದುಪಯೋಗ ಪಡೆದು ಗೌರವಯುತವಾದ ಬದುಕು ಕಟ್ಟಿಕೊಳ್ಳಬೇಕು. ಅಲೆಮಾರಿ ಮಕ್ಕಳ ಶಿಕ್ಷಣದ ಸಲುವಾಗಿ ಸರ್ಕಾರದ ಸಹಾಯದೊಂದಿಗೆ, ವೈಯಕ್ತಿಕವಾಗಿ ಅಗತ್ಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು. ತಹಸೀಲ್ದಾರ್ ಪ್ರಶಾಂತ ಪಾಟೀಲ, ತಾಪಂ ಇಒ ಯಶವಂತಕುಮಾರ, ಪುರಸಭೆ ಅಧ್ಯಕ್ಷ ರಾಜಶೇಖರ ಕಾರದಗಿ, ಪುರಸಭೆ ಉಪಾಧ್ಯಕ್ಷ ದೀಪಕ ಜಾನ್ವೇಕರ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ಸಮಾಜ ಕಲ್ಯಾಣ ಅಧಿಕಾರಿ ಆರ್.ಆರ್ ಕುಲಕರ್ಣಿ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಉಮೇಶ ಕತ್ತಿ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿದ್ದು ಬೆಳಗಾವಿಗೆ ಹೆಮ್ಮೆಯ ವಿಚಾರ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ರಾಜ್ಯ ಸರ್ಕಾರ ಸುಭದ್ರವಾಗಿದೆ. ಸಂಪುಟದಿಂದ ನನ್ನನ್ನು ಕೈಬಿಟ್ಟಿದ್ದಕ್ಕೆ ನನಗೆ ಬೇಸರವಿಲ್ಲ. ಮತಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ.| ಆನಂದ ಮಾಮನಿ ವಿಧಾನಸಭಾ ಉಪಸಭಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net