

ಕಾರಟಗಿ(ಕೊಪ್ಪಳ): ಪಟ್ಟಣದಲ್ಲಿ ಎರಡು ದಿನದ ಹಿಂದೆ ಬ್ಯಾಂಕ್ ಉದ್ಯೋಗಿ ದಂಪತಿ ಮೇಲೆ ನಡೆದ ಮಾರಣಾಂತಿಕ ಹಲ್ಲೆ, ಘಟನೆಯಲ್ಲಿ ಪತ್ನಿ ಸಾವು ಪ್ರಕರಣ ಮರ್ಯಾದಾ ಹತ್ಯೆ ಎಂಬುದು ಬಹುತೇಕ ಖಚಿತವಾಗಿದೆ.
ದಂಪತಿ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕು ಉತ್ತೂರು ಹಾಗೂ ಕಾಕನಕಟ್ಟೆ ಗ್ರಾಮದವರು. ವಿನೋದ್ (31) ತನಗಿಂತ ವಯಸ್ಸಿನಲ್ಲಿ ಹಿರಿಯಳಾದ ಅದೇ ಗ್ರಾಮದ ತ್ರಿವೇಣಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರ ಜಾತಿ ಬೇರೆಯಾದ ಕಾರಣ ವಿವಾಹಕ್ಕೆ ಮಹಿಳೆ ಕಡೆಯವರು ಒಪ್ಪಿರಲಿಲ್ಲ. ಮನೆಯವರ ವಿರೋಧದ ನಡುವೆಯೇ ವಿವಾಹ ಮಾಡಿಕೊಂಡಿದ್ದರು.
ಅನೇಕ ದಿನಗಳಿಂದ ಸಂಚು ರೂಪಿಸಿದ್ದ ತ್ರಿವೇಣಿ ಸಹೋದರನೇ ಹತ್ಯೆ ಮಾಡಿರಬಹುದು ಎನ್ನುವ ಶಂಕೆ ಮೇಲೆ ತನಿಖೆ ಸಾಗುತ್ತಿದೆ. ಮೃತಳ ಸಹೋದರ ಅವಿನಾಶ್, ಸಹೋದರ ಸಂಬಂಧಿ ಕುಮಾರ್, ಸ್ನೇಹಿತನೊಂದಿಗೆ ಸೇರಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ಪೈಕಿ ಅವಿನಾಶ್ನನ್ನು ವಶಕ್ಕೆ ಪಡೆದಿದ್ದು, ಇತರ ಆರೋಪಿಗಳ ಪತ್ತೆಗೆ ಬಲೆ ಬೀಸಿದೆ.