

ಮಂಡ್ಯ: ಅಂಗವಿಕಲರ ಅಭಿವೃದ್ಧಿಗಾಗಿ ಎರಡು ದಶಕದಿಂದ ಸೇವೆ ಸಲ್ಲಿಸುತ್ತಿರುವ ವಿಶೇಷ ಚೇತನರ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಎಂ.ಎಸ್.ಚಲುವರಾಜು ಎಲ್ಲರಿಗೂ ಮಾದರಿ ಎಂದು ಮಾರಗೌಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಡಿ.ರಮೇಶ್ ಶ್ಲಾಘಿಸಿದರು.
ಅಂಗವಿಕಲರ ಸಾಮಾಜಿಕ, ಶೈಕ್ಷಣಿಕ, ಸಂಘಟನೆ ಹಾಗೂ ಪುನರ್ವಸತಿ ಕ್ಷೇತ್ರದಲ್ಲಿನ ಜೀವಮಾನ ಸಾಧನೆಗೆ ರಾಜ್ಯಪ್ರಶಸ್ತಿ ಪಡೆದ ಎಂ.ಎಸ್.ಚಲುವರಾಜು ಅವರಿಗೆ ತಾಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ ಗ್ರಾಪಂ, ಜಿಲ್ಲಾ ವಿಕಲಚೇತನರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಅಂಗವಿಕಲರ ದಿನಾಚರಣೆಯಲ್ಲಿ ತವರಿನ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಲುವರಾಜು ಅಂಗವಿಕಲರ ಪರವಾಗಿ ಸುದೀರ್ಘ ಹೋರಾಟ ನಡೆಸಿ ಗ್ರಾಮಕ್ಕೆ ಹೆಗ್ಗಳಿಕೆ ತಂದಿದ್ದಾರೆ. ಈ ಕಾರಣದಿಂದಲೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಐಕಾನ್ ಆಗಿ ಆಯ್ಕೆ ಮಾಡಲಾಗಿತ್ತು ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಆನಂದ್ ಮಾತನಾಡಿ, ಇಚ್ಛಾಶಕ್ತಿ ಹೊಂದಿ ಹಲವಾರು ವರ್ಷಗಳಿಂದ ನಿರಂತರವಾಗಿ ನೊಂದವರ ಪಾಲಿನ ಆಶಾಕಿರಣವಾಗಿ ಸೇವೆ ಸಲ್ಲಿಸುತ್ತಾ ಗ್ರಾಮಕ್ಕೆ ಹಾಗೂ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸುತ್ತಿರುವುದು ಸಂತಸದ ವಿಚಾರ. ಇವರ ಸೇವೆ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಮತ್ತಷ್ಟು ಮಾಡುವಂತಾಗಲು ಸರ್ಕಾರ ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಎಸ್.ಚಲುವರಾಜು, ಗ್ರಾಮಸ್ಥರ ಸನ್ಮಾನ ನನಗೆ ಅತೀವ ಸಂತಸ ತಂದಿದೆ. ಇದು ನನ್ನ ಜವಾಬ್ದಾರಿಯನ್ನ ಮತ್ತಷ್ಟು ಹೆಚ್ಚು ಮಾಡಿದ್ದು, ನೊಂದವರ ಸೇವೆ ಮಾಡಲು ಪ್ರೇರಣೆಯಾಗಿದೆ ಎಂದರು.
ನಿವೃತ್ತ ಸೈನಿಕ ಸತೀಶ್, ಗ್ರಾಪಂ ಮಾಜಿ ಅಧ್ಯಕ್ಷರಾದ ಸುದರ್ಶನ್, ದಿವ್ಯಾ ಶಿವಕುಮಾರ್, ಮಾಜಿ ಉಪಾಧ್ಯಕ್ಷರಾದ ಪುಟ್ಟರಾಜು, ಕೆಂಪಮ್ಮ, ಪಿಡಿಒ ವಿನುತಾ, ಕಾರ್ಯದರ್ಶಿ ಲೋಕೇಶ್, ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್, ಗ್ರಂಥಪಾಲಕ ಗದ್ದೆಗೌಡ, ಗ್ರಾಮಸ್ಥರಾದ ಪುನೀತ್ ಭಾಸ್ಕರ್, ಸೋಮು ಇತರರಿದ್ದರು.