

ಬಸವಕಲ್ಯಾಣ: ಮಕ್ಕಳಿಗೆ ಪಾಠ ಬೋಧನೆಯೊಂದಿಗೆ ಕರ್ನಾಟಕ ರಾಜ್ಯ ಪ್ರೌಢಶಾಲೆ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾಗಿ ಯೋಗರಾಜ ಕೆ. ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಯೋಗದಾನ ಮತ್ತು ಕೊಡುಗೆಗೆ ಇಲ್ಲಿ ನೆರೆದಿರುವ ಜನರೇ ಸಾಕ್ಷಿ ಎಂದು ಶಾಸಕ ಶರಣು ಸಲಗರ ಹೇಳಿದರು.
ನಗರದ ವರ್ಷಾ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಯೋಗರಾಜ ಕೆ. ವರ್ಗಾವಣೆ ನಿಮಿತ್ತ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿದ ಅವರು, ಯೋಗರಾಜ ಶಿಕ್ಷಕರ ಸಮಸ್ಯೆ ಬಗೆಹರಿಸುವಲ್ಲಿ ತೋರಿದ ಕಾಳಜಿ ಹಾಗೂ ಮಾಡಿರುವ ಕಾರ್ಯ ಎಲ್ಲ ಬೋಧಕರಿಗೆ ಸ್ಫೂರ್ತಿ ಮತ್ತು ಪ್ರೇರಣೆಯಾಗಿದೆ ಎಂದು ಕೊಂಡಾಡಿದರು.
ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಮಾತನಾಡಿ, ಯೋಗರಾಜ ಮಾಡಿದ ಕಾರ್ಯ ಸದಾ ನೆನಪಿನಲ್ಲಿರುತ್ತದೆ. ಶಿಕ್ಷಕರ ಸಮಸ್ಯೆ ಬಗೆಹರಿಸುವಲ್ಲಿ ಅವರು ತೋರುತ್ತಿದ್ದ ಕಾಳಜಿ ಮಹತ್ವದ್ದು ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ ಮಾತನಾಡಿ, ಎಲ್ಲರ ಪ್ರೀತಿ ವಿಶ್ವಾಸ ಗಳಿಸುವುದರೊಂದಿಗೆ ಯೋಗರಾಜ ಮಾಡಿದ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಎಂಎಲ್‌ಸಿಗಳಾದ ವಿಜಯಸಿಂಗ್, ಶರಣಪ್ಪ ಮಟ್ಟೂರ, ಬಿಇಟಿ ಕಾರ್ಯದರ್ಶಿ ಧನರಾಜ ತಾಳಂಪಳ್ಳಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮು ಗುಗವಾಡ, ಗೌರವಾಧ್ಯಕ್ಷ ಮಂಜುನಾಥ ಮಾತನಾಡಿದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಯೋಗರಾಜ ಕೆ. ಹಾಗೂ ಹುಲಸೂರು ಘಟಕದ ಅಧ್ಯಕ್ಷ ಸೂರ್ಯಕಾಂತ ಅಡಕೆ ಅಧ್ಯಕ್ಷತೆ ವಹಿಸಿದ್ದರು. ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ, ಹುಲಸೂರು ತಹಸೀಲ್ದಾರ್ ಶಿವಾನಂದ ಮೇತ್ರೆ, ಸಮನ್ವಯಾಧಿಕಾರಿ ಪ್ರಭಾಕರ ಕಳಮಾಸೆ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಂಜುಕುಮಾರ ಕಾಂಗೆ, ಪ್ರಮುಖರಾದ ಅರ್ಜುನ ಕನಕ, ಮನೋಹರ ಮೈಸೆ, ಜ್ಞಾನೇಶ್ವರ ಮುಳೆ, ಶೇಖ್ ಮಹಿಬೂಬ್ ಪಟೇಲ್, ರವೀಂದ್ರರೆಡ್ಡಿ, ಮಹೇಶ ಹೂಗಾರ, ದತ್ತು ಕಾಟ್ಕರ್, ಶಂಕರ ಬಾಪುರೆ, ಶರತಕುಮಾರ, ಸೂರ್ಯಕಾಂತ ಬಿರಾದಾರ, ಸುರೇಶ ಅಕ್ಕಣ್ಣ, ಸೂರ್ಯಕಾಂತ ಪಾಟೀಲ್, ಸಾರಿಕಾ ಗಂಗಾ, ಮಲ್ಲಿಕಾರ್ಜುನ ಮೇತ್ರೆ, ಭೀಮಾಶಂಕರ ಅದೆಪ್ಪ, ಚಂದ್ರಕಾಂತ ಕಿವಡೆ, ಸಂತೋಷ ಅಕ್ಕಣ್ಣ, ರಾಜಪ್ಪ ನಂದೋಡೆ, ಅಂಬಣ್ಣ ಘಾಂಗ್ರೆ, ತುಕಾರಾಮ ರೊಡ್ಡೆ, ಶಿವಶೇಖರ ಪತಂಗೆ, ಲಕ್ಷಣ ಹೆಂಬಾಡೆ ಇತರರಿದ್ದರು.
ಸಿಆರ್‌ಸಿ ಪುಂಡಲೀಕ ಸ್ವಾಗತಿಸಿದರು. ಬಸವರಾಜ ಮಾನೋಳೆ ನಿರೂಪಣೆ ಮಾಡಿದರು. ಸಿಆರ್‌ಸಿ ಶಾಲಿವಾನ ವಂದಿಸಿದರು.
ಸಂಘ-ಸಂಸ್ಥೆಗಳಿಂದ ಗೌರವ: ಬಸವಕಲ್ಯಾಣ ತಾಲೂಕಿನ ಯರಂಡಗಿ ಶಾಲೆಯಲ್ಲಿ ೨೦ ವರ್ಷ ಸೇವೆ ಸಲ್ಲಿಸಿದ ಶಿಕ್ಷಕ ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾಗಿ ಎಂಟು ವರ್ಷ ಕಾರ್ಯನಿರ್ವಹಿಸಿದ ಯೋಗರಾಜ ಕೆ. ಅವರನ್ನು ಜನಪ್ರತಿನಿಧಿಗಳು, ಗಣ್ಯರು, ಸಂಘ-ಸಂಸ್ಥೆ ಪದಾಧಿಕಾರಿಗಳು, ಶಿಕ್ಷಕರು ಸನ್ಮಾನಿಸಿ ಗೌರವಿಸಿದರು.