

ಜಗಳೂರು: ದೇಶ ಸೇವೆಯಲ್ಲಿ ಎಷ್ಟೇ ಕಠಿಣವಾದ ಸವಾಲುಗಳು ಬಂದರೂ ಅವುಗಳನ್ನು ಸ್ವೀಕರಿಸಿ ದಿಟ್ಟತನದಿಂದ ಹೋರಾಡುವ ಯೋಧರಿಗೆ ಪ್ರತಿಯೊಬ್ಬರು ಕೃತಜ್ಞರಾಗಿರಬೇಕು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.
ತಾಲೂಕಿನ ಕಾನನಕಟ್ಟೆ ಗ್ರಾಮಕ್ಕೆ ಬುಧವಾರ ನಿವೃತ್ತಿಯಾಗಿ ಆಗಮಿಸಿದ ಯೋಧ ವಿರುಪಾಕ್ಷ ಅವರಿಗೆ ಗ್ರಾಮಸ್ಥರಿಂದ ಹಮ್ಮಿಕೊಂಡಿದ್ದ ಅದ್ಧೂರಿ ಸ್ವಾಗತ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಊರಲ್ಲಿ ಕತ್ತಲಾದರೆ ಮಕ್ಕಳನ್ನು ಹೊರಗಡೆ ಕಳಿಸಲು ಪಾಲಕರು ಬಿಡುವುದಿಲ್ಲ. ಆದರೆ, ವಿರುಪಾಕ್ಷ ಅವರ ಪಾಲಕರು ತಮ್ಮ ಮಗನನ್ನು ದೇಶ ಕಾಯಲು ಕಳುಹಿಸಿ ದೇಶಾಭಿಮಾನ ಮೆರೆದಿದ್ದಾರೆ ಎಂದರು.
ಯೋಧ ವಿರುಪಾಕ್ಷ ಮಾತನಾಡಿ, ಯೋಧನಾಗಿ ಸೇವೆ ಮಾಡಿದ್ದು ನನಗೆ ತೃಪ್ತಿ ತಂದಿದೆ. ಇಂತಹ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ನಿವೃತ್ತಿಯಾಗಿದ್ದೇನೆ. ಇರುವಷ್ಟು ದಿವಸ ಸಮಾಜ ಸೇವೆಯಲ್ಲಿ ತೊಡಗುತ್ತೇನೆ ಎಂದರು.
ಖಾನಾಮಡುಗು ಶರಣಬಸವೇಶ್ವರ ಮಠದ ಪೀಠಾಧಿಪತಿ ಐಮಡಿ ಶರಣಾರ್ಯ ಮಾತನಾಡಿದರು. ಸೇನೆಯಿಂದ ನಿವೃತ್ತರಾದ ಯೋಧರಾದ ವಿರುಪಾಕ್ಷ, ರಂಗಸ್ವಾಮಿ, ಪ್ರಹ್ಲಾದ್ ರೆಡ್ಡಿ, ಕಲ್ಲಹಳ್ಳಿ ಹಾಲೇಶ್, ಮುರುಗೇಶ್, ಮಹಾಂತೇಶ್, ರಮೇಶ್ ಅವರನ್ನು ಶಾಸಕ ದೇವೇಂದ್ರಪ್ಪ ಸನ್ಮಾನಿಸಿದರು.
ಸೇವಾ ನಿವೃತ್ತಿ ನಂತರ ಮರಳಿದ ಸೈನಿಕನನ್ನು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರವಾಸಿ ಮಂದಿರದವರೆಗೂ ಅದ್ಧೂರಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.
ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ. ಪಾಲಯ್ಯ, ಕೆಪಿಸಿಸಿ ಸದಸ್ಯ ಕಲ್ಲೇಶ್‌ರಾಜ್ ಪಟೇಲ್, ಪಲ್ಲಾಗಟ್ಟೆ ಶೇಖರಪ್ಪ, ಮಹಮದ್ ಗೌಸ್, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ. ಮಹೇಶ್ವರಪ್ಪ, ನಿವೃತ್ತ ಸೈನಿಕರಾದ ಪ್ರಹ್ಲಾದ್ ರೆಡ್ಡಿ, ರಂಗಸ್ವಾಮಿ ಮತ್ತಿತರರಿದ್ದರು.