ಹುತಾತ್ಮ ಸೈನಿಕ ಸಿರಕಜೆ ಪಳಂಗಪ್ಪ ಕುಟುಂಬಕ್ಕೆ ಸನ್ಮಾನ

honor
Published on

ಮಡಿಕೇರಿ:

ಪಕ್ಕದ ಬಾಂಗ್ಲಾ ದೇಶಕ್ಕೆ ಸ್ವಾತಂತ್ರö್ಯ ತಂದುಕೊಡುವಲ್ಲಿ ಶ್ರಮಿಸಿ ಹುತಾತ್ಮರಾದ ಭಾರತದ ಯೋಧರ ಕುಟುಂಬಗಳಿಗೆ ಬಾಂಗ್ಲಾ ದೇಶ ಗೌರವ ಅರ್ಪಿಸುವ ಕೆಲಸ ಮಾಡುತ್ತಿದ್ದು, 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ವೀರಮರಣ ಹೊಂದಿದ್ದ ಕೊಡಗಿನ ಯೋಧರ ಕುಟುಂಬ ಕೂಡ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಮೂಲತಃ ಮಡಿಕೇರಿ ತಾಲೂಕು ಭಾಗಮಂಡಲದ ಸಿರಕಜೆ ರಾಮಪ್ಪ ಎಂಬವರ ಪುತ್ರ ಸಿರಕಜೆ ಪಳಂಗಪ್ಪ ಭಾರತೀಯ ಸೇನೆಯ 6ನೇ ಫೀಲ್ಡ್ ರೆಜಿಮೆಂಟ್‌ನಲ್ಲಿ ಗನ್ನರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಬಾಂಗ್ಲಾ ವಿಮೋಚನೆಗಾಗಿ ಭಾರತ-ಪಾಕಿಸ್ಥಾನ ಯುದ್ಧ ನಡೆದ ಸಂದರ್ಭ 1971ರ ಡಿ.19ರಂದು ಪಳಂಗಪ್ಪ ವೀರಮರಣವನ್ನಪ್ಪಿದ್ದರು.

ಈ ಯುದ್ಧದಲ್ಲಿ ಬಾಂಗ್ಲಾಕ್ಕೆ ಸ್ವಾತಂತ್ರö್ಯ ತರಲು ಶ್ರಮಿಸಿ ವೀರಮರಣವನ್ನಪ್ಪಿದ ಭಾರತೀಯ ಹುತಾತ್ಮ ಯೋಧರಿಗೆ ಗೌರವ ಅರ್ಪಿಸುವ ಕೆಲಸವನ್ನು ಅಲ್ಲಿನ ಸರ್ಕಾರ ಮಾಡುತ್ತಿದ್ದು, ದಾಖಲೆಗಳಲ್ಲಿ ಲಭ್ಯವಿರುವ ಮಾಹಿತಿ ಆದರಿಸಿ ಕುಟುಂಬ ವರ್ಗದವರಿಗೆ ಬಾಂಗ್ಲಾ ದೇಶದ ಗೌರವವನ್ನು ತಲುಪಿಸುವ ಕೆಲಸವನ್ನು ಭಾರತೀಯ ಸೇನೆ ಮಾಡುತ್ತಿದೆ.

ಹುತಾತ್ಮ ಪಳಂಗಪ್ಪ ಅವರ ಕುಟುಂಬ ಕುಶಾಲನಗರ ಸಮೀಪದ ಕೊಪ್ಪ ಬಳಿ ಇರುವುದಾಗಿ ಮಾಹಿತಿ ಇದ್ದರೂ ನಿಖರ ಸ್ಥಳ ಗೊತ್ತಾಗದ ಕಾರಣ ಭಾರತೀಯ ಸೇನೆಯ ಅಧಿಕಾರಿಗಳು ಇವರನ್ನು ಹುಡುಕಾಡಲು ಸಾಕಷ್ಟು ಶ್ರಮಿಸಿದರು. ನಂತರ ಮಡಿಕೇರಿ ಸೈನಿಕ ಕಲ್ಯಾಣ ಇಲಾಖೆ ಸಹಕಾರದಲ್ಲಿ ಪಳಂಗಪ್ಪ ಕುಟುಂಬ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಸೇನಾಧಿಕಾರಿಗಳು ಲಾನ್ಸ್ ನಾಯಕ್ ಆನಂದ್ ನೇತೃತ್ವದಲ್ಲಿ ಗೌರವವನ್ನು ಹಸ್ತಾಂತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net