ಸಹಕಾರ ಸಂಘಗಳಲ್ಲಿ ಅವ್ಯವಹಾರ

hnl tp meeting oct 29
Published on

ಹೊನ್ನಾಳಿ: ತಾಲೂಕಿನ ಸಹಕಾರ ಸಂಘಗಳಲ್ಲಿ ಅವ್ಯವಹಾರ, ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥಗಳ ಅಸಮರ್ಪಕ ಪೂರೈಕೆ ಇನ್ನಿತರ ವಿಚಾರಗಳು ತಾಪಂ ಸಾಮಾನ್ಯ ಸಭೆಯಲ್ಲಿ ಗುರುವಾರ ಸುದೀರ್ಘ ಚರ್ಚೆ ನಡೆಯಿತು.

ತಾಲೂಕಿನ ಬಹುತೇಕ ಸಹಕಾರ ಸಂಘಗಳಲ್ಲಿ ರೈತರಿಗೆ ಎಟಿಎಂ ಕೊಟ್ಟು ಅವುಗಳನ್ನು ಬ್ಲಾಕ್ ಮಾಡಿದ್ದಾರೆ. ಕೆಲವರಿಗೆ ಪಾಸ್‌ಬುಕ್ ಕೊಟ್ಟಿಲ್ಲ. ಇವನ್ನು ನೀಡುವ ಮುನ್ನ ರೈತರಿಂದ ಚೆಕ್‌ಗಳಿಗೆ ಸಹಿ ಮಾಡಿಸಿಕೊಳ್ಳುತ್ತಾರೆ. ನಂತರ ಒಂದು ದಿನ ಬಿಟ್ಟು ಬರಲು ಹೇಳುತ್ತಾರೆ. ಬಂದ ಕೆಲವರಿಗೆ ಹಣ ಕೊಟ್ಟು, ಉಳಿದವರಿಗೆ ಕೊಡದೇ ಕೈ ಎತ್ತುತ್ತಾರೆ. ಅದೆಷ್ಟೋ ಕೃಷಿಕರಿಗೆ ತಮ್ಮ ಖಾತೆಯಿಂದ ಹಣ ಎಗರಿಸಿರುವುದು ಗೊತ್ತಾಗುವುದಿಲ್ಲ. ಸರ್ಕಾರದಿಂದ ಇತರೆ ಯೋಜನೆಗಳ ಹಣ ಖಾತೆಗೆ ಜಮೆಯಾಗಿರುವುದನ್ನು ಪರಿಶೀಲಿಸಲು ಬ್ಯಾಂಕ್‌ಗಳಿಗೆ ಹೋದಾಗಷ್ಟೇ ಈ ಅವ್ಯವಹಾರ ತಿಳಿದು ಬರುತ್ತಿದೆ. ಇಂಥ ಮೋಸ ತಾಲೂಕಿನ ಗ್ರಾಮೀಣ ಭಾಗದ ಸಹಕಾರ ಸಂಘಗಳಲ್ಲಿ ನಡೆಯುತ್ತಿದೆ ಎಂದು ತಾಪಂ ಸದಸ್ಯ ಶಿವಾನಂದ್, ಉಪಾಧ್ಯಕ್ಷ ರಂಗನಾಥ್ ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಸಿಡಿಒ ಸತೀಶ್, ಈ ಬಗ್ಗೆ ಪರಿಶೀಲಿಸಿ ಆರೋಪ ಸಾಬೀತಾದಲ್ಲಿ ಸಂಬಂಧಿಸಿದವರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಿಡಿಪಿಒ ಇಲಾಖೆಯಿಂದ ಮಕ್ಕಳು, ಗರ್ಭಿಣಿ, ಬಾಣಂತಿ ಇನ್ನಿತರ ಅರ್ಹ ಫಲಾನುಭವಿಗಳಿಗೆ ತಲುಪಬೇಕಾದ ಆಹಾರ ಪದಾರ್ಥಗಳು ಅನರ್ಹರಿಗೆ ತಲುಪುತ್ತಿವೆ. ಇದರಿಂದ ಅರ್ಹರು ಅನ್ಯಾಯಕ್ಕೊಳಗಾಗುವಂತಾಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ತಿಪ್ಪೇಶಪ್ಪ ದೂರಿದರು.

1ಕೆಜಿ ಹೆಸರು ಕಾಳು ಪ್ಯಾಕೆಟ್ ಸರಿಯಾದ ತೂಕವಿಲ್ಲ. ಕೆಲವು 950 ಗ್ರಾಂ ಇದ್ದರೆ ಮತ್ತೆ ಕೆಲವು 975 ಗ್ರಾಂ ಇವೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಡಿಪಿಒ, ದೂರುಗಳನ್ನಾಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಧಿಕಾರಿಗಳಿಗೆ ಏನು ಶಿಕ್ಷೆ?: ತಾಪಂ ಸಭೆಗೆ ಮೂರು ಬಾರಿ ಗೈರಾದ ಸದಸ್ಯರಿಗೆ ನೊಟೀಸ್ ಜಾರಿ ಮಾಡಿ, ಕ್ರಮಕ್ಕೆ ಶಿಫಾರಸು ಮಾಡುತ್ತೀರಿ. ಅದೇ ತಾಲೂಕು ಮಟ್ಟದ ಕೆಲ ಅಧಿಕಾರಿಗಳು ನಿರಂತರವಾಗಿ ಸಭೆಗೆ ಗೈರಾದರೂ ಕ್ರಮ ಕೈಗೊಳ್ಳುತ್ತಿಲ್ಲವೇಕೆ ಎಂದು ತಾಪಂ ಇಒ ಅವರನ್ನು ಸದಸ್ಯರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇಒ ಗಂಗಾಧರಮೂರ್ತಿ, ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ನಮಗೆ ಅಧಿಕಾರವಿಲ್ಲ. ಮೇಲಧಿಕಾರಿಗಳಿಗೆ ಶಿಫಾರಸು ಮಾಡಿದ್ದೇವೆ ಎಂದರು.

ಅಧ್ಯಕ್ಷೆ ಚಂದ್ರಮ್ಮ ಹಾಲೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ವಿಜಯಕುಮಾರ್, ಅಂಬುಜಾಕ್ಷಿ ಮರುಳಸಿದ್ದಪ್ಪ, ದಾಕ್ಷಾಯಣಮ್ಮ, ರೇಖಾ ಉಮೇಶ್, ಅಮೃತಾಬಾಯಿ, ಕವಿತಾಗೌಡ, ತಾಪಂ ದಾಕ್ಷಾಯಣಮ್ಮ ನಾಗರಾಜ್, ಇಒ ಗಂಗಾಧರಮೂರ್ತಿ, ಬಿಇಒ ರಾಜೀವ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್, ತೋಟಗಾರಿಕೆ ಸಹಾಯಕ ನಿರ್ದೇಶಕ ಶಂಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net