

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಸೋಂಪುರ ಹೋಬಳಿಯ ಹೊನ್ನೇನಹಳ್ಳಿ ಗ್ರಾಪಂಗೆ ಅಧ್ಯಕ್ಷೆಯಾಗಿ ಉಮಾದೇವಿ ಹಾಗೂ ಉಪಾಧ್ಯಕ್ಷರಾಗಿ ಬರಗೇನಹಳ್ಳಿ ಎಚ್.ಟಿ.ರಾಜೇಶ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಪಂಚಾಯಿತಿಯಲ್ಲಿ ಚುನಾವಣೆ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ವೀರಸಾಗರದ ಉಮಾದೇವಿ ಹಾಗೂ ಸಾಮಾನ್ಯಕ್ಕೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬರಗೇನಹಳ್ಳಿ ಎಚ್.ಟಿ.ರಾಜೇಶ್ ಕುಮಾರ್ ಮಾತ್ರ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಎಂದು ಚುನಾವಣಾಧಿಕಾರಿ, ಸಿಡಿಪಿಒ ನಾಗೇಶ್ ಘೋಷಿಸಿದರು.
ಅಧ್ಯಕ್ಷೆ ಉಮಾದೇವಿ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಾರ್ಖಾನೆಗಳಿಂದ ಸಮರ್ಪಕವಾಗಿ ತೆರಿಗೆ ವಸೂಲಿ ಮಾಡಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಜತೆಗೆ ಕಾರ್ಖಾನೆಗಳ ತ್ಯಾಜ್ಯವನ್ನು ಸಂಸ್ಕರಿಸದೆ ಕೆರೆಗಳಿಗೆ ಹರಿಸುವ ಆರೋಪವಿದ್ದು, ಈ ಬಗ್ಗೆ ಕಠಿಣ ಕ್ರಮ ಕೈಗೊಂಡು ಪರಿಸರ ರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದರು.
ಉಪಾಧ್ಯಕ್ಷ ಎಚ್.ಟಿ.ರಾಜೇಶ್ ಕುಮಾರ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಜಲ ಜೀವನ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಸಲು ಆದ್ಯತೆ ನೀಡಿ, ಪ್ರತಿ ಮನೆಗೂ ನಳಗಳ ಮೂಲಕವೇ ನೀರು ಪೂರೈಸಲಾಗುವುದು ಎಂದರು.
ಸದಸ್ಯರಾದ ಟಿ.ಉಮೇಶ್, ಶಿವಕುಮಾರ ನಾಯಕ, ರೇವಮ್ಮ, ಪ್ರೇಮಾ, ರಂಗಮ್ಮ, ಕೆ.ಕೆ.ಮಧುಸೂದನ, ಎಂ.ಚಂದ್ರಶೇಖರ್, ಎಸ್.ಜಿ.ಶಿವನಂದ, ಮಂಜುಳಾ, ಚಿಕ್ಕೇಗೌಡ, ಕೆ.ಎಲ್.ಸುಮಿತ್ರಾ, ವಸಂತಾ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎ.ಎಂ.ರವಿಶಂಕರ್, ಕಾರ್ಯದರ್ಶಿ ಬಿ.ಎಲ್.ಚಂದ್ರಯ್ಯ, ಕಂಪ್ಯೂಟರ್ ಆಪರೇಟರ್ ಚಂದ್ರಶೇಖರ, ಬಿಲ್ ಕಲೆಕ್ಟರ್ ವೀರಭದ್ರಸ್ವಾಮಿ, ಸಿಬ್ಬಂದಿ ರಂಗನಾಯಕ, ಸಿದ್ದನಾಯಕ, ಪ್ರವೀಣ ನಾಯಕ ಇದ್ದರು.