ಶರಾವತಿ ಪಂಪ್ಡ್ ವಿದ್ಯುತ್ ಯೋಜನೆಗೆ ವಿರೋಧ

HNR SHARAVATHI
Published on

ಹೊನ್ನಾವರ: ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ಒಯ್ಯುವ ಮತ್ತು ಶರಾವತಿ ಪಂಪ್ಡ್ ವಿದ್ಯುತ್ ಯೋಜನೆಯ ಸಾಧಕ-ಬಾಧಕಗಳ ಕುರಿತು ಇಲ್ಲಿನ ಸೋಷಿಯಲ್ ಕ್ಲಬ್ ಸಭಾಂಗಣದಲ್ಲಿ ಶುಕ್ರವಾರ ಸಭೆ ನಡೆಯಿತು.

ಶರಾವತಿ ಉಳಿಸಿ ಹೋರಾಟ ಸಮಿತಿ, ಶರಾವತಿ ನೆರೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಾಗರ ಮತ್ತು ಹೊನ್ನಾವರದ ಶರಾವತಿ ಉಳಿಸಿ ಹೋರಾಟ ಸಮಿತಿ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದರು. ಉದ್ದೇಶಿತ ಯೋಜನೆಗಳ ವಿರುದ್ಧ ಪಕ್ಷಾತೀತವಾಗಿ ರ್ಚಚಿಸಿ ಜನಜಾಗೃತಿ ಮೂಡಿಸುವ ಬಗ್ಗೆ ಮತ್ತು ಸರ್ಕಾರದ ಗಮನ ಸೆಳೆಯುವ ಬಗ್ಗೆ ಕಾರ್ಯಕ್ರಮ ರೂಪಿಸಲು ಸಭೆಯಲ್ಲಿ ರ್ಚಚಿಸಲಾಯಿತು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿ, ಶರಾವತಿ ನದಿ ಯೋಜನೆಯು ಜನಜೀವನದ ಮೇಲೆ ಹಾನಿ ಉಂಟು ಮಾಡುವ ಯೋಜನೆಯಾಗಿದೆ. ಪಶ್ಚಿಮಾಭಿಮುಖವಾಗಿ ಹರಿಯುವ ನದಿಯ ನೀರನ್ನು ಪೂರ್ವಾಭಿಮುಖವಾಗಿ ತೆಗೆದುಕೊಂಡು ಹೋಗಬಾರದು ಎನ್ನುವ ನೀತಿ ಇದೆ. 30 ಟಿಎಂಸಿ ನೀರನ್ನು 3 ಸಾವಿರ ಅಡಿ ಎತ್ತರಕ್ಕೆತ್ತಿ ಗುಡ್ಡಗಾಡು, ಕಣಿವೆಗಳನ್ನು ಅಗೆದು ಪೈಪ್​ಲೈನ್ ಮಾಡಬೇಕಾಗುತ್ತದೆ. ಇದು ಪರಿಸರದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ. ಸಮುದ್ರದ ನೀರು ಹಿಂದಕ್ಕೆ ಬರುವುದರಿಂದ ರೈತರ ಹೊಲಗದ್ದೆಗಳು ಹಾಳಾಗುತ್ತದೆ. ಈ ಯೋಜನೆಯನ್ನು ತಡೆಯಲು ಜನರು ಪಕ್ಷಾತೀತವಾಗಿ ಕೈಜೋಡಿಸಬೇಕು ಎಂದರು.

ಶಿವಮೊಗ್ಗದ ಶರಾವತಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಅಖಿಲೇಶ್ ಚಿಪಗಿ ಮಾತನಾಡಿ, ಯೋಜನೆಯಿಂದ ಹಾನಿಯೇ ಹೊರತು ಯಾವ ಲಾಭವೂ ಇಲ್ಲ. ಶರಾವತಿ ಕಣಿವೆ ಮೇಲೆ ದೊಡ್ಡ ದೌರ್ಜನ್ಯ ನಡೆಯುತ್ತಿದೆ. ಇದು ದೇಶದ ಆಸ್ತಿ, ಇದನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಹೊನ್ನಾವರದ ಶರಾವತಿ ಉಳಿಸಿ ಹೋರಾಟ ಸಮಿತಿಯ ಚಂದ್ರಕಾಂತ ಕೊಚರೇಕರ ಮಾತನಾಡಿ, ‘ಅರಣ್ಯ ಮತ್ತು ಪರಿಸರದ ರಕ್ಷಣೆ, ಕೃಷಿ ಮತ್ತು ಕುಡಿಯುವ ನೀರಿನ ಸ್ಥಳೀಯರ ಅಗತ್ಯಗಳ ಹಿತದೃಷ್ಟಿಯಿಂದ ಶರಾವತಿಯಿಂದ ಬೆಂಗಳೂರಿಗೆ ನೀರನ್ನು ಒಯ್ಯುವ ಸರ್ಕಾರದ ಉದ್ದೇಶಿತ ಯೋಜನೆ ಅನುಷ್ಠಾನ ಯೋಗ್ಯವಲ್ಲ ಎಂದರು.

ಹೋರಾಟ ಸಮಿತಿಯ ಯೋಗೇಶ ರಾಯ್ಕರ್, ವಿನೋದ ನಾಯ್ಕ, ಮಂಜುನಾಥ ನಾಯ್ಕ, ವಿದ್ಯುತ್ ಶಕ್ತಿ ಸಲಹೆಗಾರ ಶಂಕರ ಶರ್ಮ, ಉಮಾ ಮಹೇಶ, ಡಾ. ಎಸ್.ಡಿ. ಹೆಗಡೆ, ಎನ್.ಎಸ್. ಹೆಗಡೆ ಶಿವಮೊಗ್ಗ, ಸಾಗರದ ಶರಾವತಿ ನದಿ ಉಳಿಸಿ ಹೋರಾಟ ಸಮಿತಿಯ ಪದಾಧಿಕಾರಿಗಳ ನಿಯೋಗ ಮತ್ತು ವಿವಿಧ ತಜ್ಞರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net