ಪತ್ರಕರ್ತರು ಪ್ರಜ್ಞಾವಂತ ಪರಂಪರೆ ಮುಂದುವರಿಸಲಿ

25 HNR
Published on

ಹೊನ್ನಾವರ:ಪತ್ರಿಕಾ ಕ್ಷೇತ್ರಕ್ಕೆ ಹೊಸದಾಗಿ ಬರುವ ಪತ್ರಕರ್ತರು ಪ್ರಜ್ಞಾವಂತ ಪರಂಪರೆಯನ್ನು ಮುಂದುವರಿಸಬೇಕು. ನಾಡಿನ ಅಭಿವೃದ್ಧಿಗೆ ಪತ್ರಕರ್ತರೆಲ್ಲರೂ ಚಿಂತನೆ ನಡೆಸಬೇಕು ಎಂದು ಹಿರಿಯ ಪತ್ರಕರ್ತ ಜಿ.ಯು. ಭಟ್ ಹೇಳಿದರು.

ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹೊನ್ನಾವರ ತಾಲೂಕು ಘಟಕದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಬಿ. ಗಣಪತಿ ಮಾತನಾಡಿ, ಪತ್ರಿಕೋದ್ಯಮ ಮುಖ್ಯ ವೃತ್ತಿಯಲ್ಲ; ಇದು ಪ್ರವೃತ್ತಿಯಾಗಿದೆ. ಪತ್ರಿಕೋದ್ಯಮ ಇಂದು ವಿಕ್ಷಪ್ತ ಪರಿಸ್ಥಿತಿಯಲ್ಲಿ ನಿಂತಿದೆ. ಸೋಷಿಯಲ್ ಮೀಡಿಯಾ ಇಂದು ವರವೋ, ಶಾಪವೋ ಅರ್ಥವಾಗುತ್ತಿಲ್ಲ. ಇಂದು ಮೌಲ್ಯಯುತವಾದ ಪತ್ರಿಕೋದ್ಯಮದ ಅವಶ್ಯಕತೆಯಿದ್ದು, ಪತ್ರಕರ್ತನ ಪ್ರಾಮಾಣಿಕತೆಯೇ ಆತನ ಪ್ರಬಲವಾದ ಅಸ್ತ್ರವಾಗಿದೆ. ಇಂದಿನ ಯುವ ಪತ್ರಕರ್ತರು ಪತ್ರಿಕೋದ್ಯಮವನ್ನು ಪ್ರಯೋಗಶಾಲೆಯಾಗಿ ಉಪಯೋಗಿಸಿಕೊಳ್ಳಬೇಕು ಎಂದರು.

ಸಹಕಾರಿ ಧುರೀಣ ಜಾರ್ಜ್ ಫರ್ನಾಡಿಸ್ ಮಾತನಾಡಿ, ಪತ್ರಕರ್ತರು ಸಮಾಜಸೇವಕರು ಕೂಡ ಹೌದು. ಜನರ ನೋವಿಗೆ ಧ್ವನಿಯಾಗುತ್ತಾರೆ. ಸಾಮಾಜಿಕ ಜಾಲತಾಣಗಳ ನಡುವೆಯೂ ಪತ್ರಿಕೋದ್ಯಮ ಹೆಚ್ಚಿನ ಬೆಳವಣಿಗೆ ಸಾಧಿಸುತ್ತಿದೆ. ಪಕ್ಕದ ಜಿಲ್ಲೆಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳು, ದೊಡ್ಡ ಪ್ರಮಾಣದ ತಾಂತ್ರಿಕ ಮಹಾವಿದ್ಯಾಲಯಗಳು ಇವೆ. ಆದರೆ, ನಮ್ಮ ಜಿಲ್ಲೆಯಲ್ಲಿ ಇವುಗಳು ಯಾಕೆ ಆಗುತ್ತಿಲ್ಲ ಎಂಬುದರ ಚಿಂತನೆ ಆಗಬೇಕಿದೆ. ಜಿಲ್ಲೆಯ ಜನರು ಸೌಲಭ್ಯಕ್ಕಾಗಿ ಪಕ್ಕದ ಜಿಲ್ಲೆಗಳಿಗೆ ಹೋಗುವ ಪರಿಸ್ಥಿತಿ ಇದೆ. ಇವುಗಳಿಗೆ ಪರಿಹಾರ ನೀಡಲು ಪತ್ರಕರ್ತರು ಆದ್ಯತೆ ನೀಡಬೇಕು ಎಂದರು.

ಎಚ್.ಎಸ್. ದೊರೆಸ್ವಾಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಜಿ.ಯು.ಭಟ್, ಯುವ ಪತ್ರಕರ್ತ ಶಿವಾನಂದ ಮೇಸ್ತ, ಗೋವುಗಳ ಸೇವೆ ಮಾಡುತ್ತಿರುವ ಶಿವಾನಂದ ಮಡಿವಾಳ ಅವರನ್ನು ಸನ್ಮಾನಿಸಲಾಯಿತು. ಸಂಘದ ತಾಲೂಕು ಅಧ್ಯಕ್ಷ ಸತೀಶ ತಾಂಡೇಲ ಅಧ್ಯಕ್ಷತೆ ವಹಿಸಿದ್ದರು. ನ್ಯೂ ಇಂಗ್ಲಿಷ್ ಸ್ಕೂಲ್ ಆಡಳಿತ ಮಂಡಳಿ ಅಧ್ಯಕ್ಷ ರಘು ಪೈ, ಸಂಘದ ಸದಸ್ಯರಾದ ದಿನೇಶ ಹೆಗಡೆ, ಕೃಷ್ಣಮೂರ್ತಿ ಭಟ್, ಎಂ.ಎನ್. ಸುಬ್ರಹ್ಮಣ್ಯ, ಮುರಳೀಧರ ಗಾಯತೊಂಡೆ, ಶ್ರೀಧರ ನಾಯ್ಕ, ಎಚ್.ಎಲ್. ನಗರೆ, ಸಂತೋಷ ನಾಯ್ಕ, ವಿವೇಕ ಶೇಟ್ ಇದ್ದರು. ಸಂಘದ ಜಿಲ್ಲಾ ಸದಸ್ಯ ಎಚ್.ಎಂ. ಮಾರುತಿ ನಾಯ್ಕ, ನಾಗರಾಜ ನಾಯ್ಕ, ವಿನಾಯಕ ಮೇಸ್ತ, ವೀರೇಶ ಅರ್ಕಸಾಲಿ, ತಾಲೂಕು ಕಾರ್ಯದರ್ಶಿ ವಿಶ್ವನಾಥ ಸಾಲ್ಕೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸಾದ ಹೆಗಡೆ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net