ವಿದ್ಯುತ್ ಬೇಡಿಕೆ ಪೂರೈಸಲು ಯೋಜನೆ ಅಗತ್ಯ

hnr pumpded storag
Published on

ಹೊನ್ನಾವರ: ರಾಜ್ಯ ಸರ್ಕಾರವು ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್) ಮೂಲಕ ಶರಾವತಿ ಕಣಿವೆಯಲ್ಲಿ 2000 ಮೆಗಾವಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ಮುಂದಾಗಿದೆ. ರಾಜ್ಯದ ವಿದ್ಯುತ್ ಬೇಡಿಕೆ ಪೂರೈಕೆಗೆ ಈ ಯೋಜನೆ ಅನಿವಾರ್ಯವಾಗಿದೆ ಎಂದು ನಿಗಮದ ಬೆಂಗಳೂರು ಕಚೇರಿ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯ್ ತಿಳಿಸಿದರು. ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೇರುಸೊಪ್ಪ ಮತ್ತು ತಲಕಳಲೆ ಅಣೆಕಟ್ಟೆಗಳನ್ನು ಬಳಸಿಕೊಳ್ಳುವುದರಿಂದ ಹೊಸ ಅಣೆಕಟ್ಟೆ ನಿರ್ವಣದಂತಹ ಕಾಮಗಾರಿ ಈ ಯೋಜನೆಯಲ್ಲಿ ಇಲ್ಲ. 10,240 ಕೋಟಿ ರೂ. ಯೋಜನೆ ಇದಾಗಿದ್ದು, ಭೂಮಿಯ ಆಳದಲ್ಲಿ ಸುರಂಗದ ಮೂಲಕ ನೀರನ್ನು ಎತ್ತುವಳಿ ಮಾಡಿ, ಬಳಸಿ, ಅದೇ ಟನಲ್ ಮೂಲಕ ಬಿಡಲಾಗುವುದು ಎಂದು ತಿಳಿಸಿದರು. ಅಂದಾಜು 16,041 ಮರಗಳು ನಾಶ ಆಗಲಿವೆ. ಭೂಮಿಯ ಒಳಗೇ ಪಂಪ್ ಹೌಸ್ ಸೇರಲು ಸುರಂಗ ಪ್ರವೇಶಿಸುವ ಸ್ಥಳದಲ್ಲಿ ಮಾತ್ರ ಅಲ್ಪ ಪ್ರಮಾಣದ ಅರಣ್ಯ ಪ್ರದೇಶ ಬಳಕೆ ಮಾಡಿಕೊಳ್ಳಲಾಗುವುದು. ಯೋಜನೆ ಪೂರ್ಣಗೊಂಡ ನಂತರ ಸುರಂಗದ ಪ್ರವೇಶ ದ್ವಾರದ ಸುತ್ತಮುತ್ತ ಅರಣ್ಯ ಮರು ನಿರ್ವಣವಾಗಲಿದೆ. ಈ ಸಂಬಂಧ ಈಗಾಗಲೇ ರಾಜ್ಯ ಅರಣ್ಯ ಇಲಾಖೆ, ಕೇಂದ್ರ ಅರಣ್ಯ ಇಲಾಖೆ ಹಲವು ಭಾರಿ ಸ್ಥಳ ಪರಿಶೀಲನೆ ನಡೆಸಿ ಕನಿಷ್ಠ ಗಿಡ-ಮರಗಳ ಕಡಿತದೊಂದಿಗೆ ಯೋಜನೆ ಜಾರಿ ಮಾಡಲು ಕ್ರಮ ಕೈಗೊಂಡಿವೆ. ವಿದ್ಯುತ್ ಉತ್ಪಾದನೆಗೆ ಅತಿ ಕಡಿಮೆ ಭೂಮಿ ಬಳಕೆ ಮಾಡಿಕೊಳ್ಳುತ್ತಿರುವುದು ಶರಾವತಿ ಪಿಎಸ್ಪಿ ಯೋಜನೆಯ ಮತ್ತೊಂದು ಮಹತ್ವದ ಅಂಶವಾಗಿದೆ. ಈ ಯೋಜನೆಯಡಿ ಕೇವಲ 100.645 ಹೆಕ್ಟೇರ್ ಪ್ರದೇಶ (248.7 ಎಕರೆ ) ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಈ ಪೈಕಿ 54.155 ಹೆಕ್ಟೇರ್ ಅರಣ್ಯ ಪ್ರದೇಶವಾಗಿದ್ದರೆ, 46.49 ಹೆಕ್ಟೇರ್ ಅರಣ್ಯೇತರ ಪ್ರದೇಶ. ಅರಣ್ಯ ಪ್ರದೇಶ ಬಳಕೆ ವೇಳೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೆಪಿಸಿ ಕೈಗೊಳ್ಳಲಿದೆ ಮತ್ತು ಈ ಬಗ್ಗೆ ಅರಣ್ಯ ಇಲಾಖೆ, ವನ್ಯಜೀವಿ ಮಂಡಳಿಗಳೂ ಸಹ ಸೂಕ್ತ ಸಮಯದಲ್ಲಿ ಮೇಲುಸ್ತುವಾರಿ, ಪರಿಶೀಲನೆ, ಪರಾಮರ್ಶೆ ನಡೆಸಲಿವೆ. ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಕೆಪಿಸಿ ಇತರೆಡೆ ಅರಣ್ಯ ಪ್ರದೇಶ ಮರು ಸ್ಥಾಪಿಸಲು ಅರಣ್ಯ ಇಲಾಖೆಗೆ ಸ್ವಾಧೀನದಷ್ಟೇ ಪ್ರದೇಶ ಮತ್ತು ತಗುಲುವ ವೆಚ್ಚವನ್ನೂ ನೀಡುತ್ತಿದೆ ಎಂದರು. ಕೆಪಿಸಿ ಕಾರ್ಯ ನಿರ್ವಾಹಕ ಇಂಜಿನಿಯರ್ ಗಿರೀಶ ಮಾತನಾಡಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ನೀರಿನ ದೀರ್ಘಾವಧಿ ಬಳಕೆಯ ಉದ್ದೇಶ ಹೊಂದಿದೆ ಎಂದರು. ಲಿಂಗನಮಕ್ಕಿ ಜಲಾಶಯದಲ್ಲಿ ವಾರ್ಷಿಕ ಸರಾಸರಿ 140 ರಿಂದ 220 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತದೆ. ಈ ನೀರನ್ನು ಬಳಕೆ ಮಾಡಿಕೊಂಡು ಈಗಾಗಲೇ ಜಲ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಜಲ ವಿದ್ಯುತ್ ಉತ್ಪಾದನೆ ನಂತರ ಬಿಡುವ ನೀರನ್ನು ಕೃಷಿ, ಕುಡಿಯಲು, ಮೀನುಗಾರಿಗೆ ಸೇರಿದಂತೆ ವಿವಿಧ ರೀತಿಯಲ್ಲಿ ಸಾರ್ವಜನಿಕರು ಮತ್ತು ರೈತರು ಬಳಕೆ ಮಾಡಿಕೊಂಡ ನಂತರ ಉಳಿಯುವ ನೀರು ಸಮುದ್ರ ಸೇರುತ್ತಿದೆ. ಶರಾವತಿ ಪಿಎಸ್ಪಿ ಜಾರಿ ನಂತರವೂ ಈಗಿನ ಶರಾವತಿ ನೀರಿನ ಬಳಕೆದಾರರಿಗೆ ಯಾವುದೇ ರೀತಿಯಲ್ಲಿ ನೀರಿನ ಪ್ರಮಾಣದಲ್ಲಿ ಕೊರತೆ ಆಗುವುದಿಲ್ಲ ಎಂದು ವಿವರಿಸಿದರು. ಶರಾವತಿ ಕಣಿವೆ ಯೋಜನೆ ಮುಖ್ಯ ಇಂಜಿನಿಯರ್ ರಮೇಶ್, ಕಾರ್ಯನಿರ್ವಾಹಕ ಇಂಜಿನಿಯರ್ ಮಾದೇಶ್, ಕೆಪಿಸಿ ಸಿವಿಲ್ ಕಾರ್ಯ ನಿರ್ವಾಹಕ ಇಂಜಿನಿಯರ್ ಉಮಾಪತಿ ಉಪಸ್ಥಿತರಿದ್ದರು.

ಶರಾವತಿ ಪಿಎಸ್ಪಿ ಯೋಜನೆ ಜಾರಿಗೂ ಮುನ್ನ ಪ್ರಾಥಮಿಕ ಹಂತದಲ್ಲಿ ಕೇಂದ್ರ ಸರ್ಕಾರದ ಭಾರತೀಯ ಭೂ ಸರ್ವೆಕ್ಷಣಾ ಇಲಾಖೆ ಈ ಪ್ರದೇಶದಲ್ಲಿ ಸರ್ವೆ ಕಾರ್ಯ ನಡೆಸಿದ್ದು, ಪಿಎಸ್ಪಿ ಜಾರಿ ಪ್ರದೇಶದಲ್ಲಿ ಸುರಂಗ ನಿರ್ಮಾಣ ಅಥವಾ ಕಾಮಗಾರಿಯಿಂದ ಭೂ ಕುಸಿತ ಸಾಧ್ಯತೆ ಇಲ್ಲ ಎಂಬುದನ್ನು ದೃಢೀಕರಿಸಿದ ನಂತರವೇ ಯೋಜನೆಗೆ ಅನುಮತಿ ನೀಡಿದೆ. | ಗಿರೀಶ ಕೆಪಿಸಿ ಕಾರ್ಯನಿರ್ವಾಹಕ ಇಂಜಿನಿಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net