

ಹೊನ್ನಾವರ: ಪಟ್ಟಣದ ಬೆಂಗಳೂರು ಸರ್ಕಲ್ ಬಳಿ ಶನಿವಾರ ಅಕ್ರಮವಾಗಿ 21 ಎತ್ತುಗಳು ಮತ್ತು ಒಂದು ಕಂಟೇನರ್ ಲಾರಿ ವಶಪಡಿಸಿಕೊಂಡು ಎತ್ತುಗಳ ಸಾಗಾಟದಲ್ಲಿ ತೊಡಗಿದ್ದ ಇಬ್ಬರನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ.
ಚಾಲಕ ಹಾವೇರಿ ಜಿಲ್ಲೆಯ ಯಳವತ್ತಿಯ ಇಸ್ಮಾಯಿಲ್ ತಂದೆ ಖಾದರ್ ಸಾಬ್ ಹಾಗೂ ಲಾರಿಯ ಕ್ಲೀನರ್ ಮಹಾರಾಷ್ಟ್ರದ ಅಹಮ್ಮದ್ ನಗರದ ರಾಜೇಂದ್ರ ಬಲೀದ್ ಬಂಧಿತರು. ಆರೋಪಿತರು 21 ಎತ್ತುಗಳನ್ನು ಹಿಂಸಾತ್ಮಕವಾಗಿ ಕಂಟೇನರ್ ಒಂದರಲ್ಲಿ ಕಟ್ಟಿಹಾಕಿ ಮಹಾರಾಷ್ಟ್ರದಿಂದ ಭಟ್ಕಳ ಕಡೆಗೆ ಸಾಗಾಟದಲ್ಲಿ ತೊಡಗಿದ್ದರು. ಖಚಿತ ಮಾಹಿತಿ ಆಧರಿಸಿ ಹೊನ್ನಾವರ ಪೋಲಿಸರು ದಾಳಿ ನಡೆಸಿ ಜಾನುವಾರುಗಳು ಹಾಗೂ ಲಾರಿಯನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಸಾಗಾಟದಲ್ಲಿ ಇರುವಾಗಲೇ ಒಂದು ಗೂಳಿ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಹೊನ್ನಾವರ ಪಿಎಸ್‌ಐ ಗಣೇಶ ನಾಯ್ಕ ಮತ್ತು ಮಹಾಂತೇಶ ನಾಯಕ ಆರೋಪಿಗಳನ್ನು ನ್ಯಾಯಾಲಯದ ಎದುರು ಹಾಜರುಪಡಿಸಿದ್ದಾರೆ.