

ದೇವದುರ್ಗ: ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಹೊನ್ನಟಗಿ ಗ್ರಾಮ ಆಯ್ಕೆಯಾಗಿದ್ದರೂ ನಾನಾ ಕಾರಣದಿಂದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಆಗಿಲ್ಲ. ಗ್ರಾಪಂ ವ್ಯಾಪ್ತಿಯಲ್ಲಿ ಲಭ್ಯವಿರುವ ನರೇಗಾ ಯೋಜನೆಯಡಿ ಗ್ರಾಮಕ್ಕೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಮನಾಳ ಗ್ರಾಪಂ ಪಿಡಿಒ ರಂಗಪ್ಪ ನಾಯಕ ಹೇಳಿದರು.
ತಾಲೂಕಿನ ಹೊನ್ನಟಗಿ ಗ್ರಾಮದಲ್ಲಿ ಆಯೋಜಿಸಿದ್ದ ವಿಶೇಷ ಗ್ರಾಮಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಂಗಳವಾರ ಮಾತನಾಡಿದರು. ಕುಡಿವ ನೀರು, ಸ್ವಚ್ಛತೆ, ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಲ್ಯಾಂಡ್ ಆರ್ಮಿಯಿಂದ ಅನುದಾನ ಬಿಡುಗಡೆಯಾಗಿದ್ದು ಕುಡಿವ ನೀರಿನ ಬೋರ್‌ವೆಲ್ ಕೊರೆಸಿ ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸಲಾಗಿದ್ದು, ಶೀಘ್ರ ಉದ್ಘಾಟಿಸಲಾಗುವುದು ಎಂದರು.
2019-20ನೇ ಸಾಲಿನಲ್ಲಿ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ನಮ್ಮೂರು ಆಯ್ಕೆಯಾಗಿದೆ. ಯೋಜನೆ ಜಾರಿಯಾಗಿ 5 ವರ್ಷ ಕಳೆದರೂ ಜನರಿಗೆ ಕನಿಷ್ಠ ಶುದ್ಧ ಕುಡಿವ ನೀರು ನೀಡಲು ನಿಮ್ಮಿಂದ ಆಗಿಲ್ಲ. ಇನ್ನು ರಸ್ತೆ, ವಿದ್ಯುತ್ ಸಮಸ್ಯೆ ಜನರ ಜೀವಹಿಂಡುತ್ತಿದೆ. ಈ ಬಗ್ಗೆ ಹಲವು ಸಲ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಗ್ರಾಪಂ ಅಧಿಕಾರಿಗಳು ಕೇವಲ ಭರವಸೆ ನೀಡಿ ಕೈತೊಳೆದು ಕೊಂಡು ಹೋಗುತ್ತಿದ್ದಾರೆ. ನಾವು ಸಮಸ್ಯೆಗಳಿಂದ ನರಳುತ್ತಿದ್ದೇವೆ ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಪಿಡಿಒ ರಂಗಪ್ಪ ಮಾತನಾಡಿ, ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಸೂಚನೆ ಮೇರೆಗೆ ಗ್ರಾಮದಲ್ಲಿ ವಿಶೇಷ ಸಭೆ ಕರೆಯಲಾಗಿದೆ. ಗ್ರಾಮದಲ್ಲಿ ಸಂಚರಿಸಿ ಸಮಸ್ಯೆಗಳ ವರದಿ ಸಿದ್ಧಪಡಿಸಿ ಕಳಿಸಲಾಗುವುದು. ನಮ್ಮ ವ್ಯಾಪ್ತಿಯಲ್ಲಿ ಬರುವ ಅನುದಾನದಲ್ಲಿ ಸೌಲಭ್ಯ ಕಲ್ಪಿಸಲಾಗುವುದು. ಯೋಜನೆಗೆ ಸಮರ್ಪಕ ಅನುದಾನ ಬಂದಿಲ್ಲ. ಹೀಗಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ನರೇಗಾ ಹಾಗೂ 15ನೇ ಹಣಕಾಸು ಯೋಜನೆಯಡಿ ಹಂತ ಹಂತವಾಗಿ ಸಿಸಿ ರಸ್ತೆ, ಒಳಚರಂಡಿ ಸೇರಿ ವಿವಿಧ ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ತಾಪಂ ಅಧಿಕಾರಿ ಸಾಗರ್, ನರೇಗಾ ಯೋಜನೆ ವಿಭಾಗ ಅಧಿಕಾರಿ ದೀಪಕ್, ಗ್ರಾಮಸ್ಥರಾದ ಸೂಗಪ್ಪಗೌಡ, ಪರ್ವತ ರೆಡ್ಡೆಗೌಡ, ಬಸವರಾಜಪ್ಪ ಗೌಡ, ಶಾಂತಕುಮಾರ ಹೊನ್ನಟಗಿ, ಸಣ್ಣನರಸಪ್ಪ, ಮಹೇಶ, ಭೀಮಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಗಂಗಪ್ಪ ಇದ್ದರು.