

ಕಿಕ್ಕೇರಿ: ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಎತ್ತುಗಳಿಗೆ ನೊಗಕಟ್ಟಿ ಹೊನ್ನಾರು ಪೂಜೆ ಮಾಡಿದರು.
ಹೊನ್ನಾರು ಪೂಜೆ ಹಿನ್ನೆಲೆಯಲ್ಲಿ ಬೆಳಗ್ಗಿನ ಬ್ರಾಹ್ಮಿ ಮುಹೂರ್ತದಲ್ಲಿ ರೈತಾಪಿ ಸಮುದಾಯದವರು ಜಾನುವಾರುಗಳನ್ನು ಪೂಜೆ ಸಲ್ಲಿಸಿದರು. ರಾಸುಗಳ ಮೈ ತೊಳೆದು, ಎಣ್ಣೆಯಿಂದ ಮೈ ಸವರಿ, ಕೊಂಬುಗಳಿಗೆ ಎಣ್ಣೆ ಮಜ್ಜನ ಮಾಡಿ ನೊಸಲಿಗೆ ಅರಿಷಿಣ, ಕುಂಕುಮದ ತಿಲಕವಿಟ್ಟು ಕೊರಳಿಗೆ ಉಣ್ಣೆ ಕಪ್ಪು ದಾರ, ಗೆಜ್ಜೆ ಕಟ್ಟಿದರು. ನೊಗ, ನೇಗಿಲು ಇಟ್ಟು ಪೂಜಿಸಿದರು. ನಂತರ ಎತ್ತುಗಳಿಗೆ ನೊಗ ಏರಿಸಿ ನೇಗಿಲು ಕಟ್ಟಿದರು. ಬಸವೇಶ್ವರ ಗುಡಿಯ ಸುತ್ತ ಪ್ರದಕ್ಷಿಣೆ ಹಾಕಿ, ರೇಖೆ ನಿರ್ಮಿಸಿ ತಮಟೆ ವಾದ್ಯದೊಂದಿಗೆ ಸಂಭ್ರಮದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದರು.
ಎತ್ತುಗಳ ಉಳುಮೆ ನಶಿಸುತ್ತ ಟ್ರಾೃಕ್ಟರ್, ಟಿಲ್ಲರ್‌ಗಳಂತಹ ಯಂತ್ರಗಳು ಬಂದು ಜೋಡೆತ್ತುಗಳ ಉಳುಮೆ ಇಲ್ಲವಾಗಿದೆ. ಇರುವಷ್ಟು ರಾಸುಗಳಿಂದ ಹೊನ್ನಾರು ಆಚರಣೆ ಮಾಡಿದರೆ ಸಕಾಲಕ್ಕೆ ಮಳೆಯಾಗುತ್ತದೆ ಎಂಬ ನಂಬಿಕೆ ಜತೆಗೆ ಯುವ ರೈತರು ಉಳುಮೆ ಮಾಡಲು ಗೋವುಗಳ ಪರಿಚಯ ಮಾಡಿಕೊಟ್ಟಂತೆ ಆಗಲಿದೆ ಎಂದು ಗ್ರಾಮದ ಹಿರಿಯರು ಹೇಳಿದರು. ಮುಖಂಡರಾದ ಶಿವರಾಮೇಗೌಡ, ಕಾಯಿ ಮಂಜೇಗೌಡ, ಉಮೇಶ್, ನಾಗೇಗೌಡ, ಶಿವೇಗೌಡ, ತಮಟೆ ವಾದಕ ಚಾಮುಂಡಿ, ನಾಗರಾಜು ಇದ್ದರು.