

ಕುಶಾಲನಗರ:
ಉತ್ತರ ಕೊಡಗಿನ ಬಯಲುಸೀಮೆಯ ಹಾರಂಗಿ ನೀರಾವರಿ ಅಚ್ಚುಕಟ್ಟು ಪ್ರದೇಶದ ತೊರೆನೂರು, ಶಿರಂಗಾಲ, ಹೆಬ್ಬಾಲೆ ಗ್ರಾಮಗಳಲ್ಲಿ ಭಾನುವಾರ ಮತ್ತು ಸೋಮವಾರ (ಮಾ.30,31) ಯುಗಾದಿ ಹಬ್ಬದ ಅಂಗವಾಗಿ ರೈತರು ಗ್ರಾಮೀಣ ಜನಪದ ಸಂಸ್ಕೃತಿಯ ಪ್ರತೀಕವಾದ ಹೊನ್ನಾರು ಉತ್ಸವ (ಚಿನ್ನದ ಉಳುಮೆ) ಸಂಭ್ರಮದಿAದ ಆಚರಿಸಿದರು. ಯುಗಾದಿ ಹಬ್ಬ ಗ್ರಾಮೀಣ ಪ್ರದೇಶದ ರೈತರ ಪಾಲಿಗೆ ಹೊಸ ಸಂವತ್ಸರ. ಹೀಗಾಗಿ ಹಬ್ಬದ ಸಂದರ್ಭದಲ್ಲಿ ಹೊನ್ನಾರು ಉತ್ಸವ ಆಚರಿಸಲಾಗುತ್ತದೆ.
ಉತ್ಸವದ ದಿನ ಮುಂಜಾನೆ ರೈತರು ತಮಗೆ ಸೇರಿದ ಎತ್ತು ಹಾಗೂ ದನಕರುಗಳನ್ನು ನದಿಯ ನೀರಿನಿಂದ ತೊಳೆದು ಅವುಗಳ ಗವುಸು ಹಾಗೂ ಕೊಂಬಿಗೆ ಹಣಸು ವಸ್ತ್ರಾಂಲಕಾರದಿAದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ರೈತರು ಹೊಸ ಉಡುಗೆ-ತೊಡುಗೆ ತೊಟ್ಟು ತಮ್ಮ ಕೃಷಿ ಪರಿಕರಗಳಾದ ನೇಗಿಲು, ನೊಗ, ಎತ್ತಿನಗಾಡಿಯೊಂದಿಗೆ ಹತ್ಯಾರುಗಳನ್ನು ಒಪ್ಪವಾಗಿ ಜೋಡಿಸಿ ಪೂಜೆ ಸಲ್ಲಿಸಿದರು. ಉತ್ಸವದ ಅಂಗವಾಗಿ ಹೋಳಿಗೆ, ಪಾಯಿಸ ಮತ್ತಿತರ ಭಕ್ಷ್ಯ ಭೋಜನವನ್ನು ತಯಾರಿಸಿ ತಮ್ಮ ಜಾನುವಾರುಗಳಿಗೆ ತಿನ್ನಿಸಿ, ತಾವೂ ಸೇವಿಸಿ ಸಂಭ್ರಮಿಸಿದರು.
ತೊರೆನೂರು ಗ್ರಾಮದ ಬಸವೇಶ್ವರ ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರೆಲ್ಲ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿ ಸೇರಿ, ಜಾನುವಾರುಗಳಿಗೆ ಸಾಮೂಹಿಕ ಪೂಜೆ ಸಲ್ಲಿಸುವ ಮೂಲಕ ಈಡುಗಾಯಿ ಹಾಕಿ ಹೊನ್ನಾರು ಉಳುಮೆಗೆ ಸಿದ್ಧತೆ ನಡೆಸಿದರು. ಹೊಸ ಪಂಚಾAಗದAತೆ ಗ್ರಾಮದ ಟಿ.ಎಸ್. ಗಣೇಶ್ ಎಂಬ ರೈತ ನೇಗಿಲು ಮತ್ತು ಭೂಮಿಗೆ ಪೂಜೆ ಸಲ್ಲಿಸಿ ಹೊನ್ನಾರು (ಚಿನ್ನದ ಉಳುಮೆ) ಹೂಡಿ ವರ್ಷಧಾರೆ ಉಳುಮೆಗೆ ಚಾಲನೆ ನೀಡಿದರು. ದೇವಸ್ಥಾನದ ಅರ್ಚಕ ಟಿ.ಎಲ್. ಸೋಮಶೇಖರ್ ಭೂಮಿ ಪೂಜೆ ನಡೆಸಿದರು. ರೈತರು ಮೊದಲು ಬಸವೇಶ್ವರ ದೇವಸ್ಥಾನದ ಜಮೀನಿನಲ್ಲಿ ಉಳುಮೆ ಆರಂಭಿಸಿದರು.
ಹೊನ್ನಾರುಗಳು ಗ್ರಾಮದ ಬಸ್ ನಿಲ್ದಾಣದ ಬಳಿಯಿರುವ ಬಸವೇಶ್ವರ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ನಂತರ ರೈತ ಗಣೇಶ್ ಅವರನ್ನು ಹಿಂಬಾಲಿಸುವ ಮೂಲಕ ಉಳುಮೆ ಆರಂಭಿಸಿ ಈ ವರ್ಷ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಕೃತಿಯನ್ನು ಪೂಜಿಸಿದರು. ನಂತರ ರೈತರು ತಮ್ಮ ತಮ್ಮ ಜಮೀನಿಗೆ ತೆರಳಿ ಉಳುಮೆ ಆರಂಭಿಸಿದರು. ಉತ್ತರ ಕೊಡಗಿನ ಶಿರಂಗಾಲ, ತೊರೆನೂರು, ಹೆಬ್ಬಾಲೆ, ಹುಲುಸೆ, ಮಣಜೂರು, ಕೂಡಿಗೆ, ಕೂಡ್ಲೂರು, ಮದಾಲಪುರ, ಭುವನಗಿರಿ, ಮೊದಲಾದ ಗ್ರಾಮಗಳಲ್ಲಿ ಜನಪದ ಸಂಸ್ಕೃತಿಯ ಹೊನ್ನಾರು ಉತ್ಸವ ಹಿಂದಿನ ಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದೆ.
ತೊರೆನೂರು ಹೊನ್ನಾರು ಉತ್ಸವದಲ್ಲಿ ಪಾಲ್ಗೊಂಡಿದ್ದ ಸಾಹಿತಿ ಡಾ. ಜೆ. ಸೋಮಣ್ಣ ಮಾತನಾಡಿ, ಎತ್ತುಗಳ ಬದಲಿಗೆ ಯಂತ್ರ ಬಳಸುವ ಇಂದಿನ ಆಧುನಿಕ ಯುಗದಲ್ಲಿಯೂ ರೈತರು ಹಬ್ಬ ಆಚರಿಸುವ ಮೂಲಕ ನಮ್ಮ ಸಂಸ್ಕೃತಿ ಸಂಪ್ರದಾಯದ ಉಳಿವಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ತೊರೆನೂರು, ಶಿರಂಗಾಲ ಹಾಗೂ ಹೆಬ್ಬಾಲೆ ಭಾಗದಲ್ಲಿ ರೈತರು ಯುಗಾದಿ ಹಬ್ಬದ ಸಂದರ್ಭದಲ್ಲಿ ಜತೆಗೂಡಿ ಜನಪದೀಯ ಸಂಸ್ಕೃತಿಯ ಪ್ರತೀಕವಾದ ಹೊನ್ನಾರು ಉಳುಮೆಯನ್ನು ಚಾಚೂ ತಪ್ಪದೇ ನಡೆಸಿಕೊಂಡು ಬರುತ್ತಿರುವುದು ದೇವಾಲಯ ಸಮಿತಿ ಹಾಗೂ ಗ್ರಾಮಸ್ಥರ ಒಗ್ಗಟ್ಟನ್ನು ಪ್ರದರ್ಶಿಸುತ್ತದೆ. ಹೊನ್ನಾರಿನಲ್ಲಿ ಹಳ್ಳಿಕಾರ್ ತಳಿಯ ದನಕರುಗಳು ಹೆಚ್ಚಾಗಿ ಇರುವುದು ಹೆಮ್ಮೆಯ ಸಂಗತಿ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ಪೂರ್ವಿಕರು ಮೊದಲಿನಿಂದಲೂ ಅನುಸರಿಸಿಕೊಂಡು ಬರುತ್ತಿರುವ ಜನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹೊನ್ನಾರು ಉತ್ಸವ ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿದೆ. ಈ ಸಂಸ್ಕೃತಿಯನ್ನು ಉಳಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದರು.
ಗ್ರಾಮ ದೇವಾಲಯ ಸಮಿತಿಯ ಗೌರವಾಧ್ಯಕ್ಷ ಟಿ.ಡಿ.ಈಶ್ವರ್, ಸಮಿತಿ ಅಧ್ಯಕ್ಷ ಟಿ.ಬಿ.ಜಗದೀಶ್, ಕಾರ್ಯದರ್ಶಿ ಟಿ.ಎಲ್. ಮಹೇಶ್ ಕುಮಾರ್, ಗ್ರಾ.ಪಂ.ಸದಸ್ಯ ಟಿ.ಸಿ. ಶಿವಕುಮಾರ್ ಹಾಗೂ ಗ್ರಾಮಸ್ಥರು ಇದ್ದರು.