

ಹೊನ್ನಾಳಿ: ಲಸಂಪನ್ಮೂಲಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಬಿದರಗಡ್ಡೆ ಗ್ರಾಮದ ಬಳಿ 30 ಲಕ್ಷ ರೂ. ವೆಚ್ಚದಲ್ಲಿ ತುಂಗಭದ್ರಾ ನದಿಗೆ ನಿರ್ಮಿಸಿರುವ ಹೊಳೆ ಮೆಟ್ಟಿಲುಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಕುಡಿವ ನೀರಿಗೆ ಆಸರೆಯಾಗಿರುವ ತುಂಗಭದ್ರಾ ನದಿಯನ್ನು ನಾವು ಚೆನ್ನಾಗಿಟ್ಟುಕೊಳ್ಳಬೇಕು. ತ್ಯಾಜ್ಯ ವಸ್ತುಗಳು ಸೇರದಂತೆ ನೋಡಿಕೊಳ್ಳಬೇಕು ಎಂದರು.
ಬಿದರಗಡ್ಡೆ ಗ್ರಾಮಸ್ಥರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನದಿಗೆ ಹೊಳೆ ಮೆಟ್ಟಿಲು ನಿರ್ಮಿಸಲಾಗಿದೆ. ನದಿಯಲ್ಲಿ ಬಟ್ಟೆ ಶುಚಿಗೊಳಿಸಲು ಆಗಮಿಸುವ ಮಹಿಳೆಯರು, ಸಾರ್ವಜನಿಕರಿಗೆ ಇದರಿಂದ ಅನುಕೂಲವಾಗಲಿದೆ ಎಂದರು.
ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಸರ್ವತೋಮುಖ ಅಭಿವೃದ್ಧಿ ನಮ್ಮ ಗುರಿ. ಕೋಟಿಗಟ್ಟಲೇ ಅನುದಾನ ತಂದು ಅನೇಕ ಗ್ರಾಮಗಳು, ತಾಂಡಾಗಳಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಜಿಪಂ ಅಧ್ಯಕ್ಷೆ ದೀಪಾ ಜಗದೀಶ್, ಸದಸ್ಯ ಸಿ.ಸುರೇಂದ್ರನಾಯ್ಕ, ತಾಪಂ ಅಧ್ಯಕ್ಷ ಕುಳಗಟ್ಟೆ ಕೆ.ಎಲ್.ರಂಗನಾಥ್, ಎಚ್.ಕಡದಕಟ್ಟೆ ಗ್ರಾಪಂ ಸದಸ್ಯ ಬಿ.ಎಚ್ ನಾಗರಾಜ್, ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ಬಿ.ಎಚ್.ನೀಲಕಂಠಪ್ಪ, ಮುಖಂಡರಾದ ಬಿ.ಎಚ್.ಗಣೇಶಪ್ಪ, ಬಿ.ಎಚ್.ನಾಗೇಂದ್ರಪ್ಪ, ಎ.ಸಿ.ಮಲ್ಲಿಕಾರ್ಜುನ್, ಬಿ.ಎಚ್.ಕರಿಬಸಪ್ಪ ಇದ್ದರು.