ಕ್ರೀಡಾ ಕ್ಷೇತ್ರ ಸಾಗರದಷ್ಟು ವಿಶಾಲ

hnl sports oct 4
Published on

ಹೊನ್ನಾಳಿ: ಕ್ರೀಡಾ ಕ್ಷೇತ್ರ ಸಾಗರದಷ್ಟು ವಿಶಾಲ. ಇದನ್ನು ಸೀಮಿತಗೊಳಿಸದಂತೆ ದೈಹಿಕ ಶಿಕ್ಷಕರು, ಕ್ರೀಡಾ ಸಂಘದ ಪದಾಧಿಕಾರಿಗಳು ನೋಡಿಕೊಳ್ಳಬೇಕು ಎಂದು ಡಾ. ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಹಿರೇಕಲ್ಮಠದಲ್ಲಿ ನೂತನ ರಾಜ್ಯ ಹ್ಯಾಂಡ್‌ಬಾಲ್ ಅಸೋಷಿಯೇಷನ್ ಪದಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿ, ಕ್ರೀಡಾಕ್ಷೇತ್ರ ಬಹು ಉಪಯುಕ್ತ. ಇದರ ಬಗ್ಗೆ ಇತ್ತೀಚೆಗೆ ಯುವಕರಲ್ಲಿ ಆಸಕ್ತಿ ಕ್ಷೀಣಿಸುತ್ತಿದೆ. ಯಾವುದೇ ವೈಯಕ್ತಿಕ ಕ್ರೀಡೆಯಲ್ಲೂ ಬಹು ದೊಡ್ಡ ಸಾಧನೆ ಕಾಣದಂಥ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಜ್ಞಾನ ಮತ್ತು ಕ್ರಿಯೆ ಎರಡು ಅಂಶಗಳು ಇವೆ. ಜ್ಞಾನ ಸತತ ಅಭ್ಯಾಸದಿಂದ ಲಭಿಸಿದರೆ, ಕ್ರಿಯೆ ಕ್ರೀಡಾ ಚಟುವಟಿಕೆಯಿಂದ ಲಭಿಸಿ ಆರೋಗ್ಯ ವೃದ್ಧಿಸಿ ಮನೋಸ್ಥೈರ್ಯ ತುಂಬುತ್ತದೆ ಎಂದು ಹೇಳಿದರು.

ಒಂದೂವರೆ ವರ್ಷದಿಂದ ರಾಜ್ಯ ಹ್ಯಾಂಡ್‌ಬಾಲ್ ಅಸೋಸಿಯೇಷನ್‌ಗೆ ಮಾನ್ಯತೆ ಇಲ್ಲದೆ ಸಮಸ್ಯೆ ಉಂಟಾಗಿತ್ತು. ಇದಕ್ಕೀಗ ಹ್ಯಾಂಡ್‌ಬಾಲ್ ಅಸೋಷಿಯೇಷನ್ ಫೆಡರೇಷನ್ ಆಫ್ ಇಂಡಿಯಾದಿಂದ ಮಾನ್ಯತೆ ದೊರೆತಿದ್ದು ಪದಾಧಿಕಾರಿಗಳು ಮುಂದಿನ ದಿನಗಳಲ್ಲಿ ಉತ್ತಮ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಹ್ಯಾಂಡ್‌ಬಾಲ್ ಅಸೋಷಿಯೇಷನ್ ನೂತನ ಅಧ್ಯಕ್ಷ ಡಾ.ಮನೋಹರ್ ಸಾಹುಕಾರ್ ಮಾತನಾಡಿ, ರಾಜ್ಯ ಹ್ಯಾಂಡ್‌ಬಾಲ್ ಅಸೋಷಿಯೇಷನ್‌ಗೆ ಮಾನ್ಯತೆ ದೊರೆಯಲು ಸತತ ಹೋರಾಟ ಮತ್ತು ಡಾ.ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದ ಕಾರಣ ಎಂದರು.

ಅಸೋಷಿಯೇಷನ್ ಕಾರ್ಯದರ್ಶಿ ಬಿ.ಎಲ್.ಲೋಕೇಶ್, ಖಜಾಂಚಿ ಪ್ರಕಾಶ್ ನರಗಟ್ಟಿ, ಉಪಾಧ್ಯಕ್ಷ ಕೆ.ಜಿ.ಮಾದಪ್ಪ, ಎಸ್.ವಿನೋದ್, ಎಸ್‌ಎಂಎಸ್‌ಎಫ್ ಕಾಲೇಜು ಉಪನ್ಯಾಸಕರಾದ ಪ್ರವೀಣ್, ನಾಗೇಶ್, ಸಿದ್ದಲಿಂಗಸ್ವಾಮಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net