ಕರೊನಾ ಜಾಗೃತಿಗೆ ಸರ್ಕಾರಿ ನೌಕರರನ್ನೂ ಬಳಸಿಕೊಳ್ಳಿ

hnl tp meeting july 13
Published on

ಹೊನ್ನಾಳಿ: ಸರ್ಕಾರಿ ಸಂಬಳ ಪಡೆಯುವ ಎಲ್ಲ ನೌಕರರು ಕರೊನಾ ನಿಯಂತ್ರಣ ಸೇವೆಯಲ್ಲಿ ಕೈಜೋಡಿಸಿದರಷ್ಟೇ ಕರೊನಾ ವೈರಸ್ ನಿಯಂತ್ರಣ ಸಾಧ್ಯ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ತಾಪಂ ಸಾಮರ್ಥ್ಯಸೌಧದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಪಿಡಿಒ ಹಾಗೂ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿ, ತಾಲೂಕಿನ ಪ್ರಾಥಮಿಕ, ಪ್ರೌಢ ಶಾಲೆಗಳ ಶಿಕ್ಷಕರನ್ನೂ ಕರೊನಾ ಜಾಗೃತಿಗೆ ಬಳಸಿಕೊಳ್ಳುವಂತೆ ಬಿಇಒ ಜಿ.ಇ.ರಾಜೀವ್ ಅವರಿಗೆ ಸೂಚಿಸಿದರು.

4 ತಿಂಗಳಿಂದ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ತಾಲೂಕು ಆಡಳಿತ, ಪೊಲೀಸ್, ಆರೋಗ್ಯ ಇಲಾಖೆ, ಪೌರ ಕಾರ್ಮಿಕರಷ್ಟೇ ಕರೊನಾ ಸೇನಾನಿಗಳಾಗಿ ಬಿಡುವಿಲ್ಲದೇ ಕೆಲಸ ಮಾಡುತ್ತಿದ್ದಾರೆ. ಇತರರಂತೆ ಇವರಿಗೂ ಜೀವ, ಜೀವನ, ಕುಟುಂಬವಿದೆ. ಹೀಗಾಗಿ ಇತರ ನೌಕರರನ್ನೂ ಕರೊನಾ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೇವಲ ಲಾಕ್‌ಡೌನ್‌ನಿಂದ ಕರೊನಾ ನಿಯಂತ್ರಣ ಅಸಾಧ್ಯ. ಈ ಬಗ್ಗೆ ಪ್ರತಿ ಹಳ್ಳಿಗೂ ತೆರಳಿ ಜಾಗೃತಿ ಮೂಡಿಸಬೇಕು. ದೈಹಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಕುರಿತು ಮಾಹಿತಿ ನೀಡಬೇಕು. ಗ್ರಾಪಂ ಪಿಡಿಒ ಮತ್ತು ಕಾರ್ಯದರ್ಶಿಗಳು ಕಾರ್ಯ ಸ್ಥಳದಲ್ಲೇ ವಾಸವಿದ್ದು ಜನರಿಗೆ ಅಗತ್ಯ ಸೇವೆ ಒದಗಿಸಬೇಕು. ಅನಾವಶ್ಯಕವಾಗಿ ತಾಲೂಕು ಪಂಚಾಯಿತಿಗೆ ಬಾರದಂತೆ ಎಚ್ಚರಿಸಿದರು.

ಅನೇಕ ಪಿಡಿಒಗಳು ಕಚೇರಿಯಲ್ಲಿರುವುದಿಲ್ಲ, ಕರೆ ಸ್ವೀಕರಿಸುವುದಿಲ್ಲ ಎಂಬಿತ್ಯಾದಿ ದೂರುಗಳಿವೆ. ಇವು ಮರುಕಳಿಸಿದರೆ ಶಿಸ್ತುಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ಸೂಚಿಸುವುದಾಗಿ ಎಚ್ಚರಿಸಿದರು.
ಮೊಬೈಲ್ ಬಳಕೆಗೆ ಗರಂ: ಅಧಿಕಾರಿಯೊಬ್ಬರು ಸಭೆಯಲ್ಲಿ ಮೊಬೈಲ್ ಬಳಸುತ್ತಿದದ್ದನ್ನು ಗಮನಿಸಿದ ಶಾಸಕರು, ನಾನೇ ನನ್ನ ಫೋನ್ ಸ್ವಿಚ್ ಆಫ್ ಮಾಡಿದ್ದೇನೆ. ನಿಮ್ಮದೇನ್ರಿ ಸಮಸ್ಯೆ ಎಂದರು.

ತಹಸೀಲ್ದಾರ್ ತುಷಾರ್ ಬಿ.ಹೊಸೂರು, ಕರೊನಾ ನಿಯಂತ್ರಣ, ಕ್ವಾರಂಟೈನ್ ಬಗ್ಗೆ ತೆಗೆದುಕೊಂಡ ಕ್ರಮಗಳ ನಗ್ಗೆ ಸಭೆಗೆ ಮಾಹಿತಿ ನೀಡಿದರು. ಹೊನ್ನಾಳಿ ತಾಪಂ ಪ್ರಭಾರ ಅಧ್ಯಕ್ಷ ಕೆ.ಎಲ್.ರಂಗಪ್ಪ, ನ್ಯಾಮತಿ ತಾಪಂ ಅಧ್ಯಕ್ಷ ಎಸ್.ಪಿ.ರವಿಕುಮಾರ್, ಉಪಾಧ್ಯಕ್ಷ ಮರಿಕನ್ನಪ್ಪ ಮಾತನಾಡಿದರು.

ಚಿತ್ರ (ಎಚ್‌ಎನ್‌ಎಲ್ ಟಿಪಿ ಸಭೆ ಜುಲೈ 13):

ತಾಪಂ ಇಒ ಗಂಗಾಧರಮೂರ್ತಿ, ನ್ಯಾಮತಿ ತಹಸೀಲ್ದಾರ್ ತನುಜಾ, ಉಪ ತಹಸೀಲ್ದಾರ್ ನಾಗರಾಜ್, ಸಿಪಿಐ ಟಿ.ವಿ.ದೇವರಾಜ್, ಟಿಎಚ್‌ಒ ಡಾ.ಕೆಂಚಪ್ಪ, ಪಪಂ ಮುಖ್ಯಾಧಿಕಾರಿ ಎಸ್.ಆರ್.ವೀರಭದ್ರಯ್ಯ, ತಾಲೂಕು ಮಟ್ಟದ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net