

ಹೊನ್ನಾಳಿ: ಪಟ್ಟಣದ ಮೂರು ಕೇಂದ್ರಗಳಲ್ಲಿ ಭಾನುವಾರ 905 ಅಭ್ಯರ್ಥಿಗಳು ಗ್ರಾಮ ಆಡಳಿತಾಧಿಕಾರಿ ನೇಮಕಾತಿಯ ಪರೀಕ್ಷೆ ಬರೆದರು.
ಪಟ್ಟಣದ ಸರ್ಕಾರಿ ಪಿಯು ಕಾಲೇಜು, ಹಿರೇಕಲ್ಮಠದ ಚನ್ನಪ್ಪಸ್ವಾಮಿ ವಿದ್ಯಾಪೀಠ ಹಾಗೂ ವಿಜಯ ಕಾಲೇಜಿನಲ್ಲಿ ನಡೆದ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ 1,152 ಅಭ್ಯರ್ಥಿಗಳ ಪೈಕಿ 147 ಅಭ್ಯರ್ಥಿಗಳು ಗೈರಾಗಿದ್ದರು.
ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ಮೂರು ಕೇಂದ್ರಗಳಲ್ಲೂ ಸಿಸಿ ಕ್ಯಾಮರಾ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲಾಗಿತ್ತು. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಬಿಗಿ ಪೊಲೀಸ್ ವ್ಯವಸ್ಥೆ ಮಾಡಿದ್ದರು. ಹಾಸನ, ದಾವಣಗೆರೆ, ಶಿವಮೊಗ್ಗ, ತುಮಕೂರು ಹಾಗೂ ಬಳ್ಳಾರಿ ಜಿಲ್ಲೆಗಳಿಂದ ಅಭ್ಯರ್ಥಿಗಳು ಆಗಮಿಸಿದ್ದರು.
ಜಿಲ್ಲೆಯ ಅಕ್ಕಪಕ್ಕದ ತಾಲೂಕಿನ ಅಭ್ಯರ್ಥಿಗಳು ವಾಹನದ ವ್ಯವಸ್ಥೆ ಮಾಡಿಕೊಂಡು ಪಾಲಕರ ಜತೆ ಬಂದಿದ್ದರು. ಮಕ್ಕಳು ಪರೀಕ್ಷೆ ಬರೆದು ಬರುವವರೆಗೆ ಕಾಲೇಜುಗಳ ಆವರಣದಲ್ಲಿ ಕುಳಿತ್ತಿದ್ದ ಪಾಲಕರು ಪರೀಕ್ಷೆ ಬರೆದು ಬಂದ ನಂತರ ಕರೆದುಕೊಂಡು ಹೋದರು.
ಪರೀಕ್ಷಾ ವೀಕ್ಷಕರಾದ ತಹಸೀಲ್ದಾರ್ ಪಟ್ಟರಾಜಗೌಡ, ತಾಪಂ ಇಒ ಪ್ರಕಾಶ್, ಪ್ರತಿಮಾ, ಪ್ರಾಚಾರ್ಯರಾದ ವಸಂತ, ರಾಮಚಂದ್ರಪ್ಪ, ಉಮಕಾಂತ್, ಮಲ್ಲಿಕಾರ್ಜುನ್, ಎಚ್.ಆರ್. ಬಸವರಾಜ್ ಇತರರು ಇದ್ದರು.