ಡಿಜೆ ಅಬ್ಬರದಲ್ಲಿ ಮಹನೀಯರ ಆದರ್ಶ ಗೌಣ

Honnali, Valmiki, Jayantyutsava,
Published on

ಹೊನ್ನಾಳಿ: ಇಂದಿನ ಯುವಕರಿಗೆ ಬಸವಣ್ಣ, ಕನಕದಾಸ, ವಾಲ್ಮೀಕಿ, ಗಾಂಧೀಜಿ, ಅಂಬೇಡ್ಕರ್ ಅವರ ಆದರ್ಶಗಳು ಗೌಣವಾಗಿವೆ. ಎಲ್ಲರೂ ಡಿಜೆ ಸಂಗೀತದ ಅಬ್ಬರದಲ್ಲಿ ಮುಳುಗಿದ್ದಾರೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಬೇಸರ ವ್ಯಕ್ತಪಡಿಸಿದರು.

ಸಮಾಜ ಕಲ್ಯಾಣ ಇಲಾಖೆ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಮುಂದಿನ ಪೀಳಿಗೆಗೆ ಮಹಾತ್ಮರ ಆದರ್ಶಗಳು ಪ್ರೇರಣೆಯಾಗಬೇಕೆಂಬ ಉದ್ದೇಶದಿಂದ ಸರ್ಕಾರ 35 ಕ್ಕೂ ಹೆಚ್ಚು ಮಹಾತ್ಮರ ಜಯಂತ್ಯುತ್ಸವ ಆಚರಣೆ ಮೂಲಕ ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದೆ. ಆದರೆ, ಜಯಂತ್ಯುತ್ಸವ, ಸಭೆ, ಸಮಾರಂಭಗಳಿಂದ ಯುವಕರು ದೂರ ಉಳಿಯುತ್ತಾರೆ.ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿ, ಸಂಭ್ರಮಿಸುವ ಮೂಲಕ ಕೆಟ್ಟ ಸಂಪ್ರದಾಯ ತುಳಿಯುತ್ತಿದ್ದಾರೆ ಎಂದು ಹೇಳಿದರು.

ಪ್ರಾಚಾರ್ಯ ಡಾ. ಧನಂಜಯ ಉಪನ್ಯಾಸ ನೀಡಿ, ರಾಮಾಯಣ ಕೃತಿಗೆ ಸಿಕ್ಕ ಜನಪ್ರಿಯತೆ ವಾಲ್ಮೀಕಿಗೆ ಏಕೆ ಸಿಗಲಿಲ್ಲ? ಎಂದು ಪ್ರಶ್ನಿಸಿದರು. ವಾಲ್ಮೀಕಿ ಬಗೆಗಿನ ಕಟ್ಟುಕಥೆಗಳು ಹೋಗಬೇಕು ಎಂದರು.

ಉಪವಿಭಾಗಾಧಿಕಾರಿ ವಿ. ಅಭಿಷೇಕ್, ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಶಿವಾನಂದ್ ಮಾತನಾಡಿದರು.

ಪುರಸಭೆ ಅಧ್ಯಕ್ಷ ಎ.ಕೆ. ಮೈಲಪ್ಪ, ಸದಸ್ಯರಾದ ಭಾವಿಮನೆ ರಾಜಣ್ಣ, ಹೊಸಕೇರಿ ಸುರೇಶ್, ರಾಜೇಂದ್ರ ಕುಮಾರ್, ತಹಸೀಲ್ದಾರ್ ಪಟ್ಟರಾಜಗೌಡ, ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್, ಬಿಇಒ ಕೆ.ಟಿ. ನಿಂಗಪ್ಪ, ಸಮಾಜಕಲ್ಯಾಣ ಇಲಾಖೆಯ ಉಮಾ, ಪುರಸಭೆ ಮುಖ್ಯಾಧಿಕಾರಿ ಟಿ. ಲೀಲಾವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net