

ಟಿ. ಶ್ರೀನಿವಾಸ್ ಹೊನ್ನಾಳಿ
ಮಳೆಯ ಕೊರತೆಯಿಂದ ಹೊನ್ನಾಳಿ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಸಂಪೂರ್ಣ ಸೊರಗಿದೆ. ಜೂನ್ ಅರ್ಧ ತಿಂಗಳು ಕಳೆದರೂ ಮುಂಗಾರು ಕಾಣಿಸಿಕೊಳ್ಳದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಕಳೆದ ವರ್ಷ ಸಕಾಲಕ್ಕೆ ಮುಂಗಾರು ಹಂಗಾಮು ಕರ್ನಾಟಕ್ಕೆ ಪ್ರವೇಶ ಮಾಡಿದ್ದರಿಂದ ಈ ವೇಳೆಗಾಗಲೇ ಶೇ. 95ರಷ್ಟು ಬಿತ್ತನೆ ಕಾರ್ಯ ಮುಗಿದಿತ್ತು.
ಆದರೆ, ಈ ಬಾರಿ ಜೂನ್ 16 ಕಳೆದರೂ ಇನ್ನೂ ಮುಂಗಾರು ಹಂಗಾಮು ಕರ್ನಾಟಕ್ಕೆ ಪ್ರವೇಶ ಮಾಡದ ಹಿನ್ನಲ್ಲೆಯಲ್ಲಿ ತಾಲೂಕಿನಲ್ಲಿ ಶೇ. 5ರಷ್ಟು ಬಿತ್ತನೆಯಾಗಿಲ್ಲ.
ರೈತರು ಭೂಮಿ ಹದ ಮಾಡಿಕೊಂಡು ಬಿತ್ತನೆ ಕಾರ್ಯಕ್ಕೆ ಕೈಹಾಕದೆ ಮಳೆಗಾಗಿ ಆಕಾಶದತ್ತ ಚಿತ್ತ ನೆಟ್ಟಿದ್ದಾರೆ.
ಕಳೆದ ವರ್ಷ ಜೂನ್ 10ರ ವೇಳೆಗೆ ಮುಂಗಾರು ಮಳೆ ಧಾರಾಕಾರವಾಗಿ ಸುರಿದಿದ್ದರಿಂದ ಬಿತ್ತನೆ ಕಾರ್ಯ ಬಹುತೇಕ ಪೂರ್ಣಗೊಂಡಿತ್ತು.
ಕಳೆದ ವರ್ಷ ತಾಲೂಕಿನಲ್ಲಿ ಮೆಕ್ಕೆಜೋಳ 22 ಸಾವಿರ ಹೆಕ್ಟರ್, ಜೋಳ 300 ಹೆ., ತೊಗರಿ 900 ಹೆ., ಶೇಂಗಾ 650 ಹೆ, ಹತ್ತಿ 1100 ಹೆ. ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿತ್ತು.
ಆದರೆ, ಈ ವರ್ಷ ಮುಂಗಾರು ಆರಂಭವಾಗದೆ ಇರುವುದರಿಂದ ಮೆಕ್ಕೆಜೋಳ 110 ಹೆ., ಜೋಳ 70 ಹೆ., ತೊಗರಿ 120 ಹೆ. ಹಾಗೂ ಹತ್ತಿ ಕೇವಲ 30 ಹೆ. ಸೇರಿ ಒಟ್ಟು 300 ಹೆಕ್ಟರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.
ಏತನ್ಮಧ್ಯೆ, ತಾಲೂಕಿನ ಆರು ರೈತ ಸಂಪರ್ಕದಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸುವುದಕ್ಕೆ ಸಕಲ ಸಿದ್ಧತೆಗಳು ನಡೆದಿದೆ. ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಆದರೆ, ವರುಣದೇವ ಮಾತ್ರ ಕೃಪೆ ತೋರುತ್ತಿಲ್ಲ.
ಸದ್ಯ ಮಳೆ ಬರುವ ಲಕ್ಷಣಗಳಿಲ್ಲ ಎಂದು ಹವಮಾನ ಇಲಾಖೆ ತಿಳಿಸಿದೆ. ಆದ್ದರಿಂದ ರೈತರು ಸದ್ಯಕ್ಕೆ ಬಿತ್ತನೆ ಮಾಡಬೇಡಿ. ಮಳೆ ಬಂದ ನಂತರ ಬಿತ್ತನೆ ಮಾಡಿ. ಎ.ಎಸ್. ಪ್ರತಿಮಾ, ಸಹಾಯಕ ಕೃಷಿ ನಿರ್ದೇಶಕಿ, ಹೊನ್ನಾಳಿ ತಾಲೂಕು