ಗರ್ಭಧರಿಸಿ ನಿಂತ ಭೂದೇವಿಗೆ ವಿಶೇಷ ಪೂಜೆ

Honnali, Sige full moon,
Published on

ಹೊನ್ನಾಳಿ: ಹೊನ್ನಾಳಿ, ನ್ಯಾಮತಿ ಸೇರಿ ಅವಳಿ ತಾಲೂಕುಗಳ ಹೊಲಗದ್ದೆಗಳಲ್ಲಿ ಗುರುವಾರ ಭೂಮಿ ಹುಣ್ಣಿಮೆಯ ಆಚರಣೆ ಕಳೆಗಟ್ಟಿತ್ತು.
ಕೃಷಿಕರು ತಮ್ಮ ಕುಟುಂಬ ಸಮೇತ ಹೊಲಕ್ಕೆ ತೆರಳಿ ಅನ್ನ ಕೊಡುವ ಭೂ ತಾಯಿಯನ್ನು ಭಕ್ತಿ ಯಿಂದ ಪೂಜಿಸಿ ಸಮೃದ್ಧ ಬೆಳೆ ನೀಡುವಂತೆ ಪ್ರಾರ್ಥಿಸಿದರು.

ರೈತರು ಬೆಳಗ್ಗೆಯೇ ಎತ್ತಿನ ಬಂಡಿ, ಟ್ರ್ಯಾಕ್ಟರ್, ಕಾರುಗಳಲ್ಲಿ ಜಮೀನಿಗೆ ತೆರಳಿ ಗಂಗಾ ಪೂಜೆ ನೆರವೇರಿಸಿ, ಹಂದರ ಹಾಕಿ ಭೂದೇವಿ ಪ್ರತಿಷ್ಠಾಪಿಸಿದರು. ಸಿರೆ ಉಡಿಸಿ, ವಸ್ತ್ರಾಭರಣಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು.

ಹಬ್ಬಕ್ಕೆಂದೇ ತಯಾರಿಸಿದ್ದ ಗೋದಿ ಹುಗ್ಗಿ, ಅನ್ನ, ಕಡುಬು, ಚಪಾತಿ, ಶೇಂಗಾ ಚಟ್ನಿ, ಚಿತ್ರಾನ್ನ, ಹೋಳಿಗೆ, ಮಡಕೆಕಾಳು ಹಾಗೂ ಕಿಚಡಿ ಎಡೆ ಹಿಡಿದು ಜಮೀನಿನ ಸುತ್ತ ಚರಗ ಚೆಲ್ಲಿದರು.

ಹೊನ್ನಾಳಿ- ನ್ಯಾಮತಿ ತಾಲೂಕಿನ ತರಗನಹಳ್ಳಿ, ಅರಕೆರೆ, ಗೊಲ್ಲರಹಳ್ಳಿ ನರಸಗೊಂಡನಹಳ್ಳಿ, ಕಮ್ಮಾರಗಟ್ಟೆ, ಸಾಸ್ವೆಹಳ್ಳಿ, ಬೆನಕನಹಳ್ಳಿ, ಹೊಸಹಳ್ಳಿ, ಲಿಂಗಾಪುರ, ನ್ಯಾಮತಿ, ಮಾದನಬಾವಿ ಮತ್ತಿತರ ಗ್ರಾಮಗಳಲ್ಲಿ ಸೀಗೆ ಹುಣ್ಣಿಮೆ ಆಚರಿಸಲಾಯಿತು.

ಪೂಜೆ ಬಳಿಕ ಭೂಮಿ ತಾಯಿ, ಕಳ್ಳಸುಳ್ಳ, ಗಂಗಾಮಾತೆ, ಹಕ್ಕಿಪಕ್ಷಿಗಳಿಗೆ ಸೇರಿ ಒಂಭತ್ತು ಎಡೆ ಅರ್ಪಿಸಿದರು. ಆನಂತರ ಕುಟುಂಬಸ್ಥರು ಸಾಮೂಹಿಕ ಭೋಜನ ಸವಿದು ಕೆಲ ಕಾಲ ವಿಶ್ರಾಂತಿ ಪಡೆದರು. ಅಜ್ಜ, ಅಜ್ಜಿಯರು ಜಾನಪದ ಹಾಡುಗಳ ಮೂಲಕ ಮಕ್ಕಳನ್ನು ರಂಜಿಸಿದರು.ಸೀಗೆ ಹುಣ್ಣಿಮೆಯಂದು ರೈತಾಪಿ ಜನರು: ಭೂತಾಯಿಗೆ ಪೂಜೆ ಮಾಡಿ, ನಂತರ ಚರಗ ಚೆಲ್ಲುತ್ತಾರೆ. ಹೀಗೆ ಮಾಡುವುದರಿಂದ ಉತ್ತಮ ಫಸಲು ಬರುತ್ತದೆ ಎಂಬ ನಂಬಿಕೆ ರೈತರಲ್ಲಿದೆ.
I ರಮೇಶ ಗೌಡ, ತರಗನಹಳ್ಳಿ ಗ್ರಾಮದ ಪ್ರಗತಿಪರ ರೈತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net