60 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ

hnl pp meeting nov 17
Published on

ಹೊನ್ನಾಳಿ: ಮರು ಸರ್ವೆ ಮಾಡಿಸಿ 60 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ಒಳಚರಂಡಿ ಕಾಮಗಾರಿ ನಡೆಸಲಾಗುವುದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಚುನಾವಣೆ ನಡೆದು ಎರಡು ವರ್ಷಗಳ ನಂತರ ಮೊದಲ ಬಾರಿಗೆ ಪಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ಮಾತನಾಡಿದರು.

ಪಟ್ಟಣಕ್ಕೆ ಅವಶ್ಯವಿರುವ ಶುದ್ಧ ಕುಡಿವ ನೀರು ಸರಬರಾಜು ಮಾಡಲು ಹೊಸದಾಗಿ 25 ಕೋಟಿ, ಒಳ ಚರಂಡಿ ಕಾಮಗಾರಿಗೆ 60 ಕೋಟಿ ಒಟ್ಟು 85 ಕೋಟಿ ರೂ. ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಲಾಗುವುದು ಎಂದರು.

ಪಟ್ಟಣಕ್ಕೆ ಹೊಂದಿಕೊಂಡಿರುವ ಹಿರೇಮಠ ಹಾಗೂ ದೇವನಾಯ್ಕನಹಳ್ಳಿ ಎರಡು ಗ್ರಾಮಗಳನ್ನು ಪಟ್ಟಣಕ್ಕೆ ಸೇರಿಸಿ ಪಪಂ ಅನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಪಟ್ಟಣದ ಸ್ಲಂಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗೊಳಿಸುವ ಉದ್ದೇಶವಿದೆ. ಇದಕ್ಕೆ ಪೂರಕವಾದ ಎಲ್ಲ ಅಂಕಿ ಅಂಶಗಳನ್ನು ತಯಾರಿಸಿ ಸರ್ಕಾರಕ್ಕೆ ಯೋಜನೆಯ ಅಂದಾಜು ಪಟ್ಟಿ ಸಲ್ಲಿಸಬೇಕು ಎಂದು ಪಪಂ ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ ಅವರಿಗೆ ಸೂಚಿಸಿದ ಶಾಸಕರು, ಪಟ್ಟಣದ ಸಮಗ್ರ ಅಭಿವೃದ್ಧಿ ನನ್ನ ಗುರಿ. ಇದಕ್ಕೆ ಪಕ್ಷಭೇದ ಮರೆತು ಎಲ್ಲ ಸದಸ್ಯರು ಸಹಕಾರ ನೀಡಬೇಕೆಂದು ಕೋರಿದರು.

ಸದಸ್ಯರಾದ ರಂಗನಾಥ್, ಸುರೇಶ್, ಧರ್ಮಪ್ಪ ಇತರರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸದಸ್ಯ ಬಾಬು ಮಾತನಾಡಿ, ಚುನಾವಣೆಯಲ್ಲಿ ಗೆದ್ದು ಎರಡು ವರ್ಷ ಕಳೆದ ನಂತರ ಈಗ ಅಧಿಕಾರ ಸಿಕ್ಕಿದೆ. ಇದರಿಂದ ನಮ್ಮ ವಾರ್ಡಿನ ಸಮಸ್ಯೆ ಬಗೆಹರಿಸಲು ಅವಕಾಶ ದೊರೆತಿರುವುದು ಅತೀವ ಸಂತಸ ಉಂಟುಮಾಡಿದೆ ಎಂದರು.

ಪಪಂ ಅಧ್ಯಕ್ಷ ಕೆ.ವಿ. ಶ್ರೀಧರ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷೆ ರಂಜಿತಾ ಚನ್ನಪ್ಪ, ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net