

ಹೊನ್ನಾಳಿ: ತಾಲೂಕು ಕೇಂದ್ರದಲ್ಲಿರುವ ನೋಂದಣಿ ಕಚೇರಿಗೆ ಸಿಸಿ ಕ್ಯಾಮರಾವನ್ನು ಎರಡು ವಾರದೊಳಗೆ ಅಳವಡಿಸಬೇಕು. ಇಲ್ಲದಿದ್ದರೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಅಳವಡಿಸಲಾಗುವುದು ಎಂದು ಭ್ರಷ್ಟಾಚಾರ ವಿರೋಧಿ ವೇದಿಕೆ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು. ಪ್ರಥಮದರ್ಜೆ ಸಹಾಯಕ ಆನಂದ್ ಅವರಿಗೆ ಮನವಿ ನೀಡಿದರು.
ಅಧ್ಯಕ್ಷ ಗುರುಪಾದಯ್ಯ ಮಾತನಾಡಿ, ಮಧ್ಯವರ್ತಿಗಳನ್ನು ತಡೆಗಟ್ಟಬೇಕು. ಅಧಿಕೃತ ಪತ್ರಬರಹಗಾರರನ್ನು ಬಿಟ್ಟು ಮಧ್ಯವರ್ತಿಗಳಿಗೆ ಪ್ರವೇಶಕ್ಕೆ ಅವಕಾಶ ನೀಡದಂತೆ ಈಗಾಗಲೇ ಮನವಿ ಮಾಡಲಾಗಿತ್ತು. ಆದರೂ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಈ ವರ್ತನೆ ನೋಡಿದರೆ ಭ್ರಷ್ಟಾಚಾರಕ್ಕೆ ಇವರು ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನುವಂತಿದೆ ಎಂದು ಆರೋಪಿಸಿದರು.
ಗ್ರಾಮೀಣ ಭಾಗದ ರೈತರು, ಮಹಿಳೆಯರು ಮತ್ತಿತರರು ನೋಂದಣಿಗಾಗಿ ಕಚೇರಿಗೆ ಬರುತ್ತಾರೆ. ಅವರಿಗೆ ಮೋಸ ಆಗಬಾರದೆಂಬುದು ನಮ್ಮ ಉದ್ದೇಶ. ಎರಡು ವಾರದೊಳಗೆ ಸಿಸಿ ಕ್ಯಾಮರಾ ಅಳವಡಿಸಿ, ಮಧ್ಯವರ್ತಿಗಳ ಹಾವಳಿ ತಡೆಯಬೇಕು ಎಂದು ಆಗ್ರಹಿಸಿದರು.
ವೇದಿಕೆಯ ಮುಖಂಡರಾದ ಹನುಮಂತಪ್ಪ ಸೊರಟೂರು, ರಾಜು ಕಣಗಣ್ಣಾರ್, ಧನಂಜಯ, ಕರವೇ ಅಧ್ಯಕ್ಷ ವಿನಯ್ ವಗ್ಗರ್ ಇತರರಿದ್ದರು.