ಮಳೆಯಿಂದ ಬೆಳೆ ನಷ್ಟ; ಪರಿಹಾರ ಘೋಷಣೆಗೆ ಆಪ್ ಆಗ್ರಹ

Honnali rain loss AAP protest
Published on

ಹೊನ್ನಾಳಿ: ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳೆ, ಮನೆ ಕಳೆದುಕೊಂಡ ಜನರಿಗೆ ಶೀಘ್ರವೇ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ತಾಲೂಕು ಘಟಕ ಕಾರ್ಯಕರ್ತರು ಎಸಿ ಹುಲ್ಲುಮನಿ ತಿಮ್ಮಣ್ಣ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಪಕ್ಷದ ತಾಲೂಕು ಅಧ್ಯಕ್ಷ ಗುರುಪಾದಯ್ಯ ಮಠದ್ ಮಾತನಾಡಿ, ಮಳೆಯಿಂದ ಹಾನಿಯಾದ ಬೆಳೆಗಳಿಗೆ ಎಕರೆಗೆ 25 ಸಾವಿರ ರೂ., ತರಕಾರಿ ಬೆಳೆಗಳಿಗೆ 35 ಸಾವಿರ ರೂ. ಹಾಗೂ ತೋಟಗಾರಿಕೆ ಬೆಳೆಗಳಿಗೆ 50 ಸಾವಿರ ರೂ., ಮನೆಗಳಿಗೆ 2ರಿಂದ 5 ಲಕ್ಷ ರೂ. ವರೆಗೆ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಕಳೆದ ವರ್ಷ ಅತಿವೃಷ್ಟಿಯಿಂದ ಕಂಗಾಲಾಗಿದ್ದ ರೈತರು ಈ ವರ್ಷ ಕೂಡ ಸಮಸ್ಯೆಗೆ ಸಿಲುಕಿದ್ದಾರೆ. ಆರಂಭದಲ್ಲಿ ಕೃಷಿಕರು ಸಾಲ ಮಾಡಿ ಬಿತ್ತನೆ ಕಾರ್ಯ ಪೂರ್ಣಗೊಳಿಸಿದ್ದರು. ಸಸಿಗಳು ಬೆಳೆದು ನಿಂತ ವೇಳೆಗೆ ಮಳೆ ಆರಂಭವಾಗಿದ್ದು, ಈವರೆಗೆ ಬಿಟ್ಟಿಲ್ಲ. ಕೆಲ ಜಮೀನು ಹಾಗೂ ತೋಟಗಳಲ್ಲಿ ನೀರು ಸಂಗ್ರಹವಾಗಿ ನಷ್ಟಕ್ಕೆ ಕಾರಣವಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.

ಉಪವಿಭಾಗಾಧಿಕಾರಿ ಮಾತನಾಡಿ, ಬೇಡಿಕೆ ಪತ್ರವನ್ನು ಕೂಡಲೇ ಜಿಲ್ಲಾಧಿಕಾರಿಗೆ ಕಳುಹಿಸಿ, ರೈತರ ಸಂಕಷ್ಟಕ್ಕೆ ಪರಿಹಾರ ಸೂಚಿಸಲಾಗುವುದು ಎಂದು ಹೇಳಿದರು.

ಎಪಿಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಎಸ್.ಶ್ರೀನಿವಾಸ, ಉಪಾಧ್ಯಕ್ಷ ನರಸಿಂಹಪ್ಪ ಆರುಂಡಿ, ಮುಖಂಡರಾದ ಸಿ.ಸಿ.ಇಂದೂಧರ ಕೂಲಂಬಿ, ಆರುಂಡಿ ನಾಗರಾಜ್ ಕೃಷ್ಣಮೂರ್ತಿ, ಡಾ. ಸುರೇಶ್‌ಬಾಬು, ಗದ್ದಿಗೇಶ್ ಗುಡ್ಡೇಹಳ್ಳಿ, ಸುನಿಲ್, ಬಸವರಾಜ್ ಹನುಮನಹಳ್ಳಿ, ಹರೀಶ್, ಲಕ್ಷ್ಮೀಕಾಂತ್ ಹೊನ್ನಾಳಿ, ಸಿದ್ದನಗೌಡ ಕುಮಾರ್ ತುಗ್ಗಲಹಳ್ಳಿ, ಉಮೇಶ್, ಷಣ್ಮುಖ, ರಾಕೇಶ್, ಅರುಣ್‌ಕುಮಾರ್ ಕುಂದೂರು, ಮಂಜುನಾಥ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net