

ನ್ಯಾಮತಿ: ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿನಲ್ಲಿ ವಾಡಿಕೆಗಿಂತ ನಾಲ್ಕು ಪಟ್ಟು ಹೆಚ್ಚು ಮಳೆ ಸುರಿದು ಅಪಾರ ಹಾನಿ ಹಾನಿ ಸಂಭವಿಸಿದ್ದು, ಅತಿವೃಷ್ಟಿ ಪೀಡಿತ ತಾಲೂಕು ಘೋಷಣೆಗೆ ಸರ್ಕಾರದ ಗಮನ ಸೆಳೆದಿದ್ದೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ತಾಲೂಕಿನ ವಿವಿಧ ಗ್ರಾಮಗಳಿಗೆ ಭಾನುವಾರ, ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಭೇಟಿ ನೀಡಿ ಮಳೆ ಹಾನಿ ಪರಿಶೀಲನೆ ನಡೆಸಿ ಮಾತನಾಡಿದರು.
ಈಗಾಗಲೇ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಅತಿವೃಷ್ಟಿ ಪೀಡಿತ ತಾಲೂಕಗಳನ್ನಾಗಿ ಘೋಷಿಸುವ ಜತೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ. ಇದಕ್ಕೆ ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಅತಿಯಾದ ಮಳೆಯಿಂದಾಗಿ ಎರಡೂ ತಾಲೂಕುಗಳ ರೈತರ ಬದುಕು ಸಂಕಷ್ಟದಲ್ಲಿದೆ. ರೈತರ ಪಾಲಿಗೆ ವರವಾಗಬೇಕಿದ್ದ ವರುಣದೇವ ಶಾಪವಾಗಿ ಪರಿಣಮಿದ್ದಾನೆ. ಇಂಥ ಸಂದರ್ಭದಲ್ಲಿ ಅಧಿಕಾರಿಗಳು ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ಹಣಕ್ಕೆ ಬೇಡಿಕೆ ಇಟ್ಟರೆ ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಸಾಕಷ್ಟು ಮನೆ ಹಾನಿ, ಬೆಳೆ ನಷ್ಟ, ರಸ್ತೆ, ಸೇತುವೆ, ಶಾಲಾ ಕಟ್ಟಡಗಳಿಗೆ ಹಾನಿಯಾಗಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಸಮಗ್ರ ವರದಿ ಸಿದ್ದ ಪಡಿಸಲು ಸೂಚಿಸಿದ್ದೇನೆ. ಸೋಮವಾರ ಅಧಿಕಾರಿಗಳ ಸಭೆ ಕರೆದಿದ್ದು ಮಾಹಿತಿ ಪಡೆದು ಮುಖ್ಯಮಂತ್ರಿಗೆ ವರದಿ ಸಲ್ಲಿಸಲಾಗುವುದು. ಈಗಾಗಲೇ ಮನೆ ಹಾನಿಗೆ ಎ.ಬಿ.ಸಿ. ಕೆಟಗರಿಯಾಗಿ ವಿಂಗಡಿಸಿ 5 ಲಕ್ಷ, 3 ಲಕ್ಷ ಹಾಗೂ 50000 ರೂ. ಪರಿಹಾರ ಕೊಡಿಸಲಾಗುವುದು ಎಂದು ತಿಳಿಸಿದರು.
ವಿಪರೀತ ಮಳೆಯಿಂದಾಗಿ ನ್ಯಾಮತಿ ತಾಲೂಕಿನಲ್ಲಿ ಹಲವಾರು ಮನೆಗಳ ಗೋಡೆಗಳು ಕುಸಿಯುತ್ತಿದ್ದು ಶನಿವಾರ ಒಂದೇ ದಿನ ಐದರು ಮನೆಗಳು ಕುಸಿದಿದ್ದು, ನಾಲ್ಕೈದು ಕೊಟ್ಟಿಗೆಗಳೂ ನೆಲಕಚ್ಚಿವೆ. ಸವಳಂಗದಲ್ಲಿ 14 ಮಿಮೀ, ಬೆಳಗುತ್ತಿ 13.8 ಮಿಮೀ, ಗೋವಿನಕೋವಿಯಲ್ಲಿ 10.4 ಮಿ.ಮೀ. ಮಳೆ ದಾಖಲಾಗಿದೆ.
ತುಂಬಿದ ಕೆರೆ ಕಟ್ಟೆ: ಕಳೆದ 10 ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅವಳಿ ತಾಲೂಕುಗಳ ಕೆರೆ-ಕಟ್ಟೆ, ಹಳ್ಳಗಳು ತುಂಬಿ ಹರಿದಿವೆ. ಮತ್ತೆ ನದಿಯಲ್ಲಿ ನೀರು ಅಪಾಯದ ಮಟ್ಟ ತಲುಪುತ್ತಿದೆ. ಕಳೆದ ಮೂರು ದಿನಗಳ ಹಿಂದೆ ಕೇವ 2.250 ಮೀಟರ್ ಇದ್ದ ನದಿ ನೀರಿನ ಮಟ್ಟ ಇದೀಗ 10.600 ಮೀಟರ್ ನಷ್ಟು ಏರಿಕೆಯಾಗಿದೆ. 11.500 ಮೀಟರ್ ತಲಿಪಿದರೆ ಅಪಾಯದತ್ತ ತಲುಪಲಿದೆ.