

ಹೊನ್ನಾಳಿ: ಮಕ್ಕಳಲ್ಲಿ ಅಪೌಷ್ಟಿಕತೆ ಕಾಡಬಾರದೆಂಬ ಸದುದ್ದೇಶದಿಂದ ಸರ್ಕಾರ ಕೋಟ್ಯಾಂತರ ಅನುದಾನ ನೀಡುತ್ತಿದ್ದು, ಇದರ ಸದ್ಬಳಕೆ ಅತ್ಯವಶ್ಯಕ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ತಾಲೂಕಿನ ಮಾಸಡಿ ಗ್ರಾಮದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಆಯೋಜಿಸಿದ್ದ ವಿಶ್ವ ಪೌಷ್ಟಿಕಾಂಶ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಆರೋಗ್ಯ ಕಾಪಾಡಲು ಸರ್ಕಾರ ವಿವಿಧ ಆಹಾರ ನೀಡುತ್ತಿದೆ. ಹಾಗೆಯೇ ಮಹಿಳೆಯರು ಪೋಷಣ್ ಅಭಿಯಾನದಡಿ ನೀಡುವ ಪೌಷ್ಟಿಕ ಆಹಾರಗಳನ್ನು ಸೇವಿಸಿ ಸದೃಢರಾಗಬೇಕು. ಮಕ್ಕಳ ಲಾಲನೆ- ಪಾಲನೆ ಕ್ರಮ ತಾಯಂದಿರಿಗೆ ಮಾತ್ರ ಗೊತ್ತು. ಆದ್ದರಿಂದ ಅಂಗನವಾಡಿ ಕೇಂದ್ರಗಳಿಗೆ ಶೇ. 99ರಷ್ಟು ಮಹಿಳೆಯರನ್ನೇ ನೇಮಿಸಲಾಗಿದೆ ಎಂದು ಹೇಳಿದರು.
ಮಹಿಳೆಯರಿಗೆ ಸೌಟು ಹಿಡಿಯುವುದು ಗೊತ್ತು, ಗನ್ ಹಿಡಿದು ದೇಶ ಕಾಯುವುದು ತಿಳಿದಿದೆ. ಪೆನ್ ಹಿಡಿದು ಆಡಳಿತ ಮಾಡುತ್ತಾರೆ. ಸಮಯ ಸಂದರ್ಭ ಬಂದರೆ ಜನಪ್ರತಿನಿಧಿಗಳನ್ನು ಮನೆಗೆ ಕಳುಹಿಸುತ್ತಾರೆ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಅಭಿಷೇಕ್ ಮಾತನಾಡಿ, ಕೇಂದ್ರ ಸರ್ಕಾರದ ಮಹಾ ಪೋಷಣ್ ಅಭಿಯಾನದಿಂದ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುತ್ತಿದೆ. ರಾಜ್ಯ ಸರ್ಕಾರ ಸಹ ಕೈಜೋಡಿಸಿರುವ ಕಾರಣ ಈ ಯೋಜನೆಗೆ ಮತ್ತಷ್ಟು ಬಲ ಬಂದಿದೆ ಎಂದರು.
ಸಿಡಿಪಿಒ ಜ್ಯೋತಿ ಮಾತನಾಡಿ, ಗರ್ಭಿಣಿಯರು ಹಾಗೂ ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ನಿವಾರಿಸಲು 2018ರಲ್ಲಿ ಕೇಂದ್ರ ಸರ್ಕಾರ ಪೋಷಣ್ ಅಭಿಯಾನ ಆರಂಭಿಸಿತು. ಗರ್ಭಿಣಿಯರು ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ ಅಪೌಷ್ಟಿಕತೆ ನಿವಾರಿಸುತ್ತಿದೆ ಎಂದರು.
ಶೂನ್ಯ ವರ್ಷದಿಂದ 6 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಮತ್ತು ತಾಯಂದಿರ ಆರೋಗ್ಯ ಕಾಪಾಡುವುದು ಪೋಷಣ್ ಅಭಿಯಾನದ ಗುರಿ ಎಂದರು. ಇದೇ ವೇಳೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ಪದರ್ಶನ ಮಾಡಲಾಯಿತು.
ತಹಸೀಲ್ದಾರ್ ಪಟ್ಟರಾಜಗೌಡ ಮಾತನಾಡಿದರು. ಮೇಲ್ವೀಚಾರಕರಾದ ಮಂಜುಳಮ್ಮ, ರೇಣುಕಾ, ದೇವರೆಡ್ಡಿ, ಗ್ರಾಪಂ ಸದಸ್ಯರಾದ ಅಶೋಕ್, ನೇತ್ರಾವತಿ, ಹಳದಪ್ಪ, ನಾಗರಾಜ್ ಇತರರಿದ್ದರು.