

ಹೊನ್ನಾಳಿ: ತಾಲೂಕಿನ ನರಸಗೊಂಡನಹಳ್ಳಿಯ ಜಮೀನೊಂದರಲ್ಲಿ ಫಸಲಿಗೆ ಬಂದಿದ್ದ 200 ಬಾಳೆಗೊನೆಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ.
ಗ್ರಾಮದ ರೈತ ಅಶೋಕ್ ಎಂಬುವರು ಒಂದು ಎಕರೆಯಲ್ಲಿ 750 ಬಾಳೆ ಗಿಡ ಬೆಳೆದಿದ್ದು, ಫಸಲಿಗೆ ಬಂದಿದ್ದವು. ಇದರಲ್ಲಿ 200 ಬಾಳೆ ಗೊನೆಗಳನ್ನು ಶುಕ್ರವಾರ (12ರ) ರಾತ್ರಿ ಕೊಯ್ದು ಕದ್ದೊಯ್ದಿದ್ದಾರೆ.
ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಆ.13ರಂದೇ ದೂರು ನೀಡಿದ್ದರೂ ಎಫ್‌ಐಆರ್ ದಾಖಲಾಗಿಲ್ಲ. ತಕ್ಷಣ ಎಫ್‌ಐಆರ್ ದಾಖಲಾದರೆ ಉಳಿದಿರುವ ಬಾಳೆಯನ್ನಾದರೂ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ ಎಂಬುದು ರೈತ ಅಶೋಕ್ ಅಳಲು.
ಒಂದು ಬಾಳೆಗೊನೆಯಲ್ಲಿ 15 ಕೆಜಿ ಬಾಳೆ ಹಣ್ಣು ಸಿಗಲಿದೆ. ಮಾರುಕಟ್ಟೆಯಲ್ಲಿ ಒಂದು ಕೆಜಿಗೆ 80ರಿಂದ 90 ರೂ. ಇದೆ. 200 ಬಾಳೆಗೊನೆಗೆ 3000 ಕೆಜಿ ತೂಕವಿದ್ದು, ಅಂದಾಜು 2.40 ಲಕ್ಷ ರೂ. ಮಾರುಕಟ್ಟೆಯಲ್ಲಿ ದೊರೆಯುತ್ತಿತ್ತು ಎಂದು ಎಂಬುದು ರೈತನ ಲೆಕ್ಕಾಚಾರವಾಗಿದೆ.
ಮಳೆಯಿಂದ ಮನೆಗೂ ಹಾನಿ:
ಬಾಳೆ ತೋಟದಲ್ಲಿ 200 ಬಾಳೆ ಗೊನೆಯನ್ನು ಕಳ್ಳತನ ಮಾಡಿದ್ದರೆ, ಇತ್ತ ಮಳೆಯಿಂದಾಗಿ ನಮ್ಮ ಮನೆ ಸಹ ಕುಸಿದು ಬಿದ್ದಿದೆ ಎಂದು ರೈತ ಅಶೋಕ್ ಅಳಲು ತೋಡಿಕೊಂಡರು.