

ನ್ಯಾಮತಿ: ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತರುವಲ್ಲಿ ಕ್ರಮಕೈಗೊಳ್ಳುವ ಮೂಲಕ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಪಟ್ಟಣದ ಶ್ರೀ ಮಹಂತೇಶ್ವರ ವೀರಶೈವ ಕಲ್ಯಾಣ ಮಂದಿರದಲ್ಲಿ ಬುಧವಾರ ನ್ಯಾಮತಿ ಬ್ಲಾಕ್ ಕಾಂಗ್ರೆಸ್, ಟೌನ್ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಸಭೆ ನಡೆಸಿ ವಿದ್ಯುತ್ ದರ ಏರಿಕೆ ಮಾಡಿದೆ. ಜೂನ್‌ನಿಂದ ಅದು ಜಾರಿಗೆ ಬಂದಿದೆ. 200 ಯೂನಿಟ್‌ವರೆಗೂ ಉಚಿತ ವಿದ್ಯುತ್ ನೀಡುತ್ತದೆ, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಜನಪರ ಕಾರ್ಯಕ್ರಮ ನೀಡುವುದನ್ನು ಸಹಿಸದ ಕೆಲ ಮನಸ್ಥಿತಿಗಳು ಅಪಪ್ರಚಾರದಲ್ಲಿ ತೊಡಗಿವೆ ಎಂದು ಹೇಳಿದರು.
ಹಿಂದಿನ ಸರ್ಕಾರದಲ್ಲಿ ತೆಗೆದುಕೊಂಡ ತೀರ್ಮಾನದಂತೆ ಇಂದು ವಿದ್ಯುತ್ ಬಿಲ್ ನೀಡಲಾಗುತ್ತಿದೆ. ಚುನಾವಣೆ ಬಂದ ಹಿನ್ನಲೆಯಲ್ಲಿ ತಡೆ ಹಿಡಿಯಲಾಗಿತ್ತು. ಇಂದಿನ ವಿದ್ಯುತ್ ಬಿಲ್ ದರ ಏರಿಕೆಗೂ ಕಾಂಗ್ರೆಸ್ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ನಮ್ಮ ಸರ್ಕಾರ ಬಡವರ ಪರ ಇದೆ. ಚುನಾವಣೆ ವೇಳೆ ಜನರಿಗೆ ನೀಡಿದ್ದ ಐದು ಗ್ಯಾರಂಟಿಗಳ ಭರವಸೆಯ ಮೊದಲ ಗ್ಯಾರಂಟಿ ಈಗ ಜಾರಿಗೆ ತಂದಿದ್ದು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ ಎಂದರು.
ಮಾಜಿ ಶಾಸಕ ಡಾ.ಡಿ.ಬಿ. ಗಂಗಪ್ಪ ಮಾತನಾಡಿ, ಪ್ರತಿ ಕಾರ್ಯಕರ್ತರು ಜಿಪಂ, ತಾಪಂ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಸ್ಥಾನಮಾನ ದೊರಕಿಸುವ ಮೂಲಕ ಪಕ್ಷವನ್ನು ತಾಲೂಕಿನಲ್ಲಿ ಮತ್ತಷ್ಟು ಸದೃಢ ಮಾಡಬೇಕಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಎಚ್.ಬಿ. ಉಮಾಪತಿ, ನ್ಯಾಮತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡೇರಿ ವಿಶ್ವನಾಥ್, ಡಾ.ಈಶ್ವರ ನಾಯ್ಕ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನುಚ್ಚಿನ ವಾಗೀಶ, ಮಹಿಳಾ ಅಧ್ಯಕ್ಷೆ ವನಜಾಕ್ಷಮ್ಮ ಮಾತನಾಡಿದರು. ಇದಕ್ಕೂ ಮೊದಲು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‌್ಯಾಲಿ ನಡೆಸಲಾಯಿತು.
ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಶಿವಯೋಗಿ, ನ್ಯಾಮತಿ ಟೌನ್ ಕಾಂಗ್ರೆಸ್ ಅಧ್ಯಕ್ಷ ಗುಂಡೂರು ಲೋಕೇಶ್, ಶಿಮೂಲ್ ನಿರ್ದೇಶಕ ಹನುಮನಹಳ್ಳಿ ಬಸವರಾಜಪ್ಪ, ಜಿಪಂ ಮಾಜಿ ಸದಸ್ಯರಾದ ಜೀವೇಶಪ್ಪ, ಶಿವರಾಂ ನಾಯ್ಕ, ಮುಖಂಡರಾದ ಕೋಡಿಕೊಪ್ಪ ಶಿವಣ್ಣ, ಹೊಸಮನೆ ಮಲ್ಲಿಕಾರ್ಜುನಪ್ಪ ಕುಂಬಾರ, ಸಿ.ಕೆ. ಸುರೇಶ್, ಡಿಶ್ ಕರಿಬಸಪ್ಪ, ಸಲಾಂ ಸಾಹೇಬರು ಇತರರು ಇದ್ದರು.