ಮಣಿಪುರ ಗಲಭೆ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ

manipur
Published on

ಹೊನ್ನಾಳಿ: ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗಿಯ ಕಲಹದ ಹಿನ್ನೆಲೆಯಲ್ಲಿ ದೊಂಬಿ, ಗಲಭೆ ಹಾಗೂ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳು ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು ಎಂದು ಪ್ರಜಾ ಪರಿವರ್ತನ ವೇದಿಕೆ ರಾಜ್ಯ ಸಂಚಾಲಕ ಡಿ.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪುರದಲ್ಲಿ ನಾಲ್ಕಾರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಜತೆಗೆ ಮನೆಗಳಿಗೆ ಬೆಂಕಿ ಹಚ್ಚುತ್ತಿದ್ದರೂ ಈ ವರೆಗೂ ಪ್ರಧಾನಿ ಮೋದಿಯವರಾಗಲಿ ಅಥವಾ ಗೃಹ ಸಚಿವರಾಗಲಿ ಅಲ್ಲಿಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಮಾಡಿಲ್ಲ. ಇದರಿಂದ ಅಲ್ಲಿ ನಿತ್ಯ ಪ್ರತಿಭಟನೆ, ಹಲ್ಲೆ, ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಈಗಲಾದರೂ ಅಲ್ಲಿಗೆ ಪ್ರಧಾನಿಗಳು ಹೋಗಿ ಶಾಂತಿ ನೆಲಸುವ ನಿಟ್ಟಿನಲ್ಲಿ ಸರ್ವ ಜನಾಂಗದ ಜತೆ ಚರ್ಚಿಸಿ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಸಾಮೂಹಿಕ ಅತ್ಯಾಚಾರ ಮಾಡಿ ಜೀವಂತವಾಗಿ ಸುಟ್ಟುಹಾಕುತ್ತಾರೆ ಎಂದರೆ ನಮ್ಮ ಸಮಾಜ ಎತ್ತ ಸಾಗುತ್ತಿದೆ? ಎಂಬುದನ್ನು ನೀವೇ ಊಹಿಸಿ ಎಂದರು. ಜನಾಂಗೀಯ ಗಲಭೆಯನ್ನು ತಕ್ಷಣ ನಿಲ್ಲಿಸಿ ಅಲ್ಲಿ ಶಾಂತಿಗೆ ಭಂಗ ತರುವ ಎಲ್ಲರನ್ನು ಮುಲಾಜಿಲ್ಲದೆ ಬಂಧಿಸಿ ಹಾಗೂ ಮಹಿಳೆಯರನ್ನು ಅತ್ಯಾಚಾರ ಮಾಡಿ ಜೀವಂತ ಸುಟ್ಟ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆದೇಶ ಮಾಡಬೇಕು. ಇದರಿಂದ ಇಂತಹ ಹೀನಕೃತ್ಯ ಮಾಡುವ ಆರೋಪಿಗಳಿಗೆ ತಕ್ಕಪಾಠವಾಗಲಿದೆ ಎಂದು ತಿಳಿಸಿದರು.

ಸಂತಾಪ: ಇದೇ ವೇಳೆ ತಾಲೂಕಿನ ಹೊಟ್ಯಾಪುರ ಗ್ರಾಮದಲ್ಲಿರುವ ಶ್ರೀ ಮಠದ ಸಿದ್ಧೇಶ್ವರ ಶಿವಾಚಾರ್ಯರ ನಿಧನಕ್ಕೆ ಪ್ರಜಾಪರಿವರ್ತನಾ ವೇದಿಕೆ ಮುಖಂಡರುಗಳು ಒಂದು ನಿಮಿಷ ಮೌನ ಆಚರಿಸಿ ಸಂತಾಪ ಸೂಚಿಸಿದರು.

ವೇದಿಕೆ ತಾಲೂಕು ಅಧ್ಯಕ್ಷ ಹನುಮಂತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಅರಕೆರೆ, ಸಿದ್ದಪ್ಪ, ಶಿವಮೂರ್ತಿ, ಪ್ರವೀಣ್, ಹರೀಶ್, ರಾಜು, ರೇಣುಕಾ ಹಾಗೂ ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net