

ಹೊನ್ನಾಳಿ: ಕಳೆದ ಒಂದು ವಾರದಿಂದ ಪಟ್ಟಣದಲ್ಲೇ ಬೀಡುಬಿಟ್ಟಿರುವ ಹುಚ್ಚು ಮಂಗವೊಂದು ನಾಲ್ವರನ್ನು ಕಚ್ಚಿ ಗಾಯಗೊಳಿಸಿ ನಾಗರಿಕರಲ್ಲಿ ಆತಂಕ ಉಂಟುಮಾಡಿದೆ.
ಪಪಂ ಅಧ್ಯಕ್ಷ ಕೆ.ವಿ. ಶ್ರೀಧರ್, ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ ನೇತೃತ್ವದಲ್ಲಿ ಅರಣ್ಯ ಇಲಾಖೆ ಮತ್ತು ಪಪಂ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರೂ ಹುಚ್ಚು ಮಂಗ ಸೆರೆ ಸಿಕ್ಕಿಲ್ಲ. ಇದರಿಂದ ನಾಗರಿಕರು ಕೈಯಲ್ಲಿ ಕೋಲು ಹಿಡಿದು ಓಡಾಡುವಂತಾಗಿದೆ.
ಮಂಗವು ದುರ್ಗಿಗುಡಿ, ಸೊಪ್ಪಿನಕೇರಿ, ಹೊಸಕೇರಿ, ಪೇಟೆ ಸೇರಿ ಹಲವಾರು ವಾರ್ಡುಗಳಲ್ಲಿ ಓಡಾಡುವ ಮೂಲಕ ಜನರ ನಿದ್ದೆಗೆಡಿಸಿದೆ.
ವಲಯ ಅರಣ್ಯಾಧಿಕಾರಿ ದೇವರಾಜ್ ಮಾತನಾಡಿ, ಮಂಗಗಳನ್ನು ಹಿಡಿಯುವುದರಲ್ಲಿ ಪಳಗಿರುವ ಬಾಣಾವರದ ರಾಮಕೃಷ್ಣ ಎಂಬುವರಿಗೆ ತಿಳಿಸಿದ್ದೇವೆ. ಅವರು ಶುಕ್ರವಾರ ಬೆಳಗ್ಗೆ ಬಂದು ಮಂಗನನ್ನು ಹಿಡಿಯುತ್ತಾರೆ. ಸಾರ್ವಜನಿಕರ‌್ಯಾರು ಆತಂಕ ಪಡುವುದು ಬೇಡ ಎಂದರು.
ಪಪಂ ಮುಖ್ಯಾಧಿಕಾರಿ ವೀರಭದ್ರಯ್ಯ ಮಾತನಾಡಿ, ಕಳೆದ ಮೂರು ದಿನಗಳಲ್ಲಿ ಹುಚ್ಚು ಮಂಗವು ನಾಲ್ವರನ್ನು ಕಚ್ಚಿ ಗಾಯಗೊಳಿಸಿದೆ. ಇದು ಸೆರೆ ಸಿಗುವವರೆಗೆ ಮಕ್ಕಳು ಮತ್ತು ವೃದ್ಧರು ಮನೆಯಿಂದ ಹೊರಬರದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.