ರಾಜಿ ಸಂಧಾನದಿಂದ ಸುಖಿ ಜೀವನ

New Project
Published on

ಹೊನ್ನಾಳಿ: ಕಕ್ಷಿದಾರರು ವ್ಯಾಜ್ಯಗಳನ್ನು ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದೊಂದಿಗೆ ಇತ್ಯರ್ಥಪಡಿಸಿಕೊಂಡು ಸುಖಿ ಜೀವನ ನಡೆಸಬೇಕು ಎಂದು ದಾವಣಗೆರೆಯ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರವೀಣ್‌ಕುಮಾರ್ ಹೇಳಿದರು.

ಪಟ್ಟಣದ ನ್ಯಾಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಕಕ್ಷಿದಾರರ ಕ್ಷೇಮಕ್ಕಾಗಿ ಜು. 13ರಂದು ಲೋಕ ಅದಾಲತ್ ಹಮ್ಮಿಕೊಂಡಿದ್ದು, ಹಳೆಯ ಹಾಗೂ ಹೊಸ ಪ್ರಕರಣಗಳ ಕಕ್ಷಿದಾರರು ಇದರಲ್ಲಿ ಭಾಗವಹಿಸಿ, ವ್ಯಾಜ್ಯಗಳ ಬಗ್ಗೆ ಚರ್ಚಿಸಿ ರಾಜಿ ಮಾಡಿಕೊಂಡು ಸಂತೋಷದಿಂದ ಬಗೆಹರಿಸಿಕೊಳ್ಳಬೇಕು. ಮನುಷ್ಯನ ಬದುಕಿನಲ್ಲಿ ಸಣ್ಣಪುಟ್ಟ ವ್ಯತ್ಯಾಸದಿಂದ ವ್ಯಾಜ್ಯಗಳು ಸಂಭವಿಸುವುದು ಸಹಜ. ಇವುಗಳನ್ನೇ ದೊಡ್ಡದು ಮಾಡಬಾರದು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ.ಡಾ. ಎಂ.ವಿ. ವೆಂಕಟೇಶ್ ಕರೆಣ್ಣವರ ಮಾತನಾಡಿ, ಪ್ರತಿ ವ್ಯಕ್ತಿಗೂ ಬದುಕು ಸಾಗಿಸಲು ನೆಮ್ಮದಿ, ಶಾಂತಿ ಅವಶ್ಯಕ. ಇವು ದೊರೆಯಬೇಕಾದರೆ ಕುಟುಂಬ, ಇತರರಲ್ಲಿ ವ್ಯಾಜ್ಯಗಳು, ಜಗಳ ಹೊಂದಿರಬಾರದು. ಸಮಸ್ಯೆಗಳಿದ್ದರೂ ಇತ್ಯರ್ಥ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬೇಕು. ಕೋರ್ಟ್‌ಗೆ ಹೋಗಿ ಅಲ್ಲೂ ಬಗೆಹರಿಯದಿದ್ದಾಗ ಲೋಕ ಅದಾಲತ್‌ನಲ್ಲಿ ಇತ್ಯರ್ಥ ಮಾಡಿಕೊಳ್ಳುವುದು ಸೂಕ್ತ ಎಂದರು.

ಸಾಮಾನ್ಯವಾಗಿ ಪ್ರತಿ ಮೂರು ತಿಂಗಳೊಗೊಮ್ಮೆ ಲೋಕ ಅದಾಲತ್ ನಡೆಯುತ್ತದೆ. ಅನಾವಶ್ಯಕವಾಗಿ ನ್ಯಾಯಾಲಯಕ್ಕೆ ಅಲೆದಾಡದೆ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನ ಮಾಡಿಕೊಂಡರೆ ಎರಡು ಕಕ್ಷಿದಾರರಿಗೂ ನೆಮ್ಮದಿ ಜತೆಗೆ ಹಣ-ಸಮಯ ಉಳಿತಾಯವಾಗಲಿದೆ ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಪಿ.ಜಯಪ್ಪ, ಹಿರಿಯ ವಕೀಲ ಶ್ರೀನಿವಾಸಮೂರ್ತಿ ಮಾತನಾಡಿದರು.

ಹೊನ್ನಾಳಿ ಮತ್ತು ಹರಿಹರ ಸಿವಿಲ್ ನ್ಯಾಯಾಧೀಶೆ ಪದ್ಮಶ್ರೀ ಮನೋಳಿ, ಹೊನ್ನಾಳಿ ಸಿವಿಲ್ ನ್ಯಾಯಾಧೀಶ ದೇವದಾಸ, ಹೆಚ್ಚುವರಿ ನ್ಯಾಯಾಧೀಶ ಪುಣ್ಯಕೋಟಿ, ಎಪಿಪಿ ಭರತ್ ಭೀಮಯ್ಯ, ಸಂಘದ ಕಾರ್ಯದರ್ಶಿ ಪುರುಷೋತ್ತಮ್, ವಕೀಲ ಚಂದ್ರಪ್ಪ ಮಡಿವಾಳ, ದೊರೆಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net