ಇಂದಿನಿಂದ ಮಧ್ಯಾಹ್ನ 2 ಗಂಟೆವರೆಗಷ್ಟೇ ಓಡಾಟ

hnl meeting jun 30
Published on

ಹೊನ್ನಾಳಿ: ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಲೂಕು ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕೋವಿಡ್-19 ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿ, ಕರೊನಾ ವಾರಿಯರ್ಸ್‌ಗಳು, ಅಧಿಕಾರಿಗಳು ಹಾಗೂ ನಾನು ಎಷ್ಟೇ ಅರಿವು ಮೂಡಿಸಿದರೂ ಜನರು ಅಂತರ ಕಾಯ್ದುಕೊಳ್ಳುತ್ತಿಲ್ಲ, ಮಾಸ್ಕ್ ಧರಿಸುತ್ತಿಲ್ಲ ಕಡಿವಾಣ ಅಗತ್ಯ ಎಂದರು.

ಆಶಾ ಕಾರ್ಯಕರ್ತೆಯರು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಮಾಹಿತಿ ಪಡೆಯುತ್ತಿರುವ ಸಂದರ್ಭದಲ್ಲಿ ಜನರು ಸರಿಯಾದ ಮಾಹಿತಿ ನೀಡುತ್ತಿಲ್ಲ ಇದು ಸಲ್ಲದು. ಜನತೆ ಅನಗತ್ಯ ಹೊರ ಬಾರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇಂದಿನಿಂದ ಮಧ್ಯಾಹ್ನದ ನಂತರ ಲಾಕ್‌ಡೌನ್: ಅವಳಿ ತಾಲೂಕುಗಳಲ್ಲಿ ಕರೊನಾ ಸೋಂಕು ಹೆಚ್ಚಾಗದಂತೆ ಜು.1ರಿಂದ ಬೆಳಗ್ಗೆ 7ರಿಂದ ಮಧ್ಯಾಹ್ನ 2ಗಂಟೆವರೆಗೆ ಮಾತ್ರ ವ್ಯಾಪಾರ-ವಹಿವಾಟು ಸೀಮಿತಗೊಳಿಸಿದೆ. ಮುಂದಿನ ನಾಲ್ಕು ಭಾನುವಾರ ಸಂಪೂರ್ಣ ಬಂದ್ ಮಾಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ತಹಸೀಲ್ದಾರ್ ತುಷಾರ್ ಬಿ.ಹೊಸೂರು ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ 6 ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಮಂಗಳವಾರ ನ್ಯಾಮತಿ ತಾಲೂಕಿನ ಜೀನಹಳ್ಳಿಯಲ್ಲಿ ಒಂದು ವರ್ಷದ ಮಗುವಿಗೆ ಕರೊನಾ ಬಂದಿದ್ದು ತಾಯಿ, ಮಗುವನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ಕಳಿಸಿಕೊಡಲಾಗಿದೆ ಎಂದರು.

6 ಪ್ರಕರಣಗಳ ಪೈಕಿ ನಾಲ್ವರಿಗೆ ಬೆಂಗಳೂರು ಟ್ರಾವಲ್ ಹಿಸ್ಟ್ರಿ ಹಿನ್ನೆಲೆಯಿಂದ ಬಂದಿರುವುದು ತಿಳಿದು ಬಂದಿದೆ ಎಂದರು.
ನ್ಯಾಮತಿ ತಹಸೀಲ್ದಾರ್ ತನುಜಾ, ಸಿಪಿಐ ದೇವರಾಜ್, ಬಿಇಒ ಜಿ.ರಾಜೀವ್, ತಾಲೂಕು ವೈದ್ಯಾಧಿಕಾರಿ ಡಾ.ಕೆಂಚಪ್ಪ, ಪಪಂ ಮುಖ್ಯಾಧಿಕಾರಿ ಎಸ್.ಆರ್.ವೀರಭದ್ರಯ್ಯ, ಪ್ರಭಾರ ಇಒ ಅಜ್ಜಪ್ಪ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net