ಭಾರತೀಯರೆಲ್ಲರೂ ಮೂಲ ಹಿಂದುಗಳು

Honnali, Hirekal Math, Shivadiksha,
Published on

ಡಾ.ಒಡೆಯರ ಚನ್ನಮಲ್ಲಿಕಾರ್ಜುನ ಶ್ರೀ ಅಭಿಪ್ರಾಯ I ಹಿರೇಕಲ್ಮಠದಲ್ಲಿ ವಟುಗಳಿಗೆ ಶಿವದೀಕ್ಷೆ

ಹೊನ್ನಾಳಿ: ಭಾರತೀಯರೆಲ್ಲರೂ ಮೂಲ ಹಿಂದುಗಳಾಗಿದ್ದು, ಯಾರು ಏನೇ ಹೇಳಿದರೂ ವೀರಶೈವ ಲಿಂಗಾಯತರು ಮೊದಲು ಹಿಂದುಗಳು ಎನ್ನುವುದನ್ನು ಮರೆಯಬಾರದು ಎಂದು ಡಾ.ಒಡೆಯರ ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶ್ರಾವಣ ಮಾಸದ ಅಂಗವಾಗಿ ಹಿರೇಕಲ್ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿವದೀಕ್ಷಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ಪ್ರತಿಯೊಬ್ಬನ ಹಿಂದುವಿನ ಹೃದಯದಲ್ಲಿ ಆಚಾರ, ವಿಚಾರ ಹಾಗೂ ಸಂಸ್ಕಾರಗಳೆಲ್ಲವೂ ಹಿಂದುವೇ ಆಗಿರುವ ಕಾರಣ ನಾವು ಮೂಲತಃ ಹಿಂದುಗಳು ಎನ್ನುವುದನ್ನು ಅರಿಯಬೇಕು ಎಂದರು.

ಶಿವದೀಕ್ಷೆ ಪಡೆದವರು ನಿತ್ಯವೂ ಪ್ರಾತಃಕಾಲದಲ್ಲಿ ಇಷ್ಟಲಿಂಗವನ್ನು ಪಂಚಾಕ್ಷರಿ ಮಂತ್ರ ಜಪಿಸಿ ಪೂಜೆ ಮಾಡಬೇಕು. ಬಳಿಕ ಪ್ರಸಾದ ಸೇವಿಸಬೇಕು. ದೀಕ್ಷೆ ಪಡೆದವರ ಎದೆಯಂಗಳದಲ್ಲಿ ಇಷ್ಟಲಿಂಗ ಸದಾ ಇರಬೇಕು ಎಂದರು.

ವೀರಶೈವರು ಆಚಾರ, ವಿಚಾರಗಳನ್ನು ರೂಢಿಸಿಕೊಂಡು ದೈವತ್ವದತ್ತ ನಡೆಯುವುದನ್ನು ಕಲಿಯಬೇಕು. ಸಂಸ್ಕೃತಿ, ಪರಂಪರೆ ಮರೆಯದೇ ಆಚರಿಸುತ್ತ ಸಾಗಬೇಕಿದೆ ಎಂದು ಹೇಳಿದರು.

ವೀರಶೈವ ಧರ್ಮವನ್ನು ಜಗದ್ಗುರುಗಳಾದ ಶ್ರೀ ರೇಣುಕಾದಿ ಪಂಚಾಚಾರ್ಯರು ಸ್ಥಾಪಿಸಿದ್ದು, ಭಾರತದಲ್ಲಿ ಪಂಚಾಚಾರ್ಯರಿಂದ ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ, ಶ್ರೀ ಕೇದಾರ, ಶ್ರೀ ಶ್ರೀಶೈಲ ಹಾಗೂ ಶ್ರೀ ಕಾಶಿ ಎಂಬ ಪಂಪೀಠಗಳು ಸ್ಥಾಪನೆಗೊಂಡಿವೆ ಎಂದರು.

ಹಾರ‌್ನಹಳ್ಳಿ ರಾಮಲಿಂಗೇಶ್ವರ ಮಠದ ಶ್ರೀ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮ ಪರಂಪರೆಯಲ್ಲಿ ಪೂಜಾ- ಪುನಸ್ಕಾರಗಳು ಅತೀ ಮುಖ್ಯ ಪಾತ್ರವಹಿಸುತ್ತವೆ. ನಮ್ಮ ಎಲ್ಲ ಪೂಜಾದಿ ಕೈಂಕರ್ಯಗಳನ್ನು ತಪ್ಪದೇ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಕೋಣಂದೂರು ಮತ್ತು ಪುರ ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪಂಚಾಕ್ಷರಿ ಮಹಾಮಂತ್ರವನ್ನು ಪಠಿಸಿ ಇಷ್ಟಲಿಂಗ ಪೂಜೆ ಮಾಡಬೇಕು ಎಂದು ಹೇಳಿದರು.

ನಿವೃತ್ತ ಮುಖ್ಯಶಿಕ್ಷಕ ಎಂ.ಪಿ.ಎಂ. ವಿಜಯಾನಂದಸ್ವಾಮಿ, ಪುರಾಣ ಪ್ರವಾಚಕ ಬಸವರಾಜ ಶಾಸ್ತ್ರಿ ಮಾತನಾಡಿದರು. ಶ್ರೀಮಠದ ವ್ಯವಸ್ಥಾಪಾಕ ಚನ್ನಬಸಯ್ಯ, ನಿವೃತ್ತ ಪ್ರಾಚಾರ್ಯ ಕೆ.ಜಿ. ಉಮಾಪತಿ, ಬಸಯ್ಯಶಾಸ್ತ್ರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net