ಪ್ರಕೃತಿ ಮುನಿಸು ಅವಘಡಗಳಿಗೆ ಕಾರಣ

Honnali, Hirekal Math, Pooja program,
Published on

ಡಾ. ಚನ್ನಮಲ್ಲಿಕಾರ್ಜನ ಸ್ವಾಮೀಜಿ ಅನಿಸಿಕೆ l ಹೊನ್ನಾಳಿಯ ಹಿರೇಕಲ್ಮಠದಲ್ಲಿ ಪೂಜಾಕಾರ್ಯ

ಹೊನ್ನಾಳಿ: ಭಾರತೀಯ ಸನಾತನ ಧರ್ಮ ಉಳಿಸಿ, ಬೆಳೆಸುವ ಕಾರ್ಯ ತ್ವರಿತವಾಗಿ ಆಗಬೇಕಿದೆ ಎಂದು ಡಾ.ಒಡೆಯರ ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶ್ರಾವಣ ಮಾಸದ ಪ್ರಯುಕ್ತ ಹಿರೇಕಲ್ಮಠದಲ್ಲಿ ಸೋಮವಾರ ಶ್ರೀ ಮಠದ ಕರ್ತೃಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ನೆರವೇರಿಸಿದ ನಂತರ ಆಶೀರ್ವಚನ ನೀಡಿದರು.

ಇತ್ತೀಚಿನ ದಿನಗಳಲ್ಲಿ ಆಸ್ತಿಕರ ಸಂಖ್ಯೆ ಕ್ಷೀಣಿಸಿ, ನಾಸ್ತಿಕರ ಸಂಖ್ಯೆ ಹೆಚ್ಚಾಗಿ ನಮ್ಮ ಸಂಸ್ಕೃತಿ, ಸಂಪ್ರದಾಯ, ಧಾರ್ಮಿಕ ಮನೋಭಾವ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.

ಪ್ರಕೃತಿಯಲ್ಲಿ ವಿಕೃತಿಗಳು ಜರುಗಿದಾಗ ಪ್ರಕೃತಿ ಮುನಿಸಿಕೊಂಡು ಅವಘಡಗಳು ಜರುಗುತ್ತವೆ. ಇಂತಹ ಅವಘಡಗಳು ನಮ್ಮ ಕಣ್ಮುಂದೆಯೇ ನಡೆಯುತ್ತಿವೆ. ಇನ್ನಾದರೂ ಮನುಷ್ಯರು ಪ್ರಕೃತಿ ವಿರುದ್ಧದ ವರ್ತನೆಯನ್ನು ತಕ್ಷಣ ನಿಲ್ಲಿಸಬೇಕಿದೆ ಎಂದರು.

ಮನುಷ್ಯರು ಯಾವಾಗಲೂ ಗುಣಾತ್ಮಕವಾಗಿ ಯೋಚನೆ ಮಾಡುವುದನ್ನು ರೂಢಿಸಿಕೊಂಡರೆ, ನಕರಾತ್ಮಕ ಚಿಂತನೆಗಳು ದೂರವಾಗುತ್ತವೆ. ದೇವರು, ಗುರು, ಹಿರಿಯರಲ್ಲಿ ಭಕ್ತಿ ಮನೋಭಾವ ತುಂಬಿಕೊಂಡು ನಡೆಯನ್ನು ಸನ್ಮಾರ್ಗದಲ್ಲಿ ತೆಗೆದುಕೊಂಡು ಹೋಗುವತ್ತ ಚಂತನೆ ಮಾಡಬೇಕು ಎಂದು ಹೇಳಿದರು.

ಲಿಂಗೈಕ್ಯ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಬೇರೆ ಕಡೆಗಳಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕಂಡು ಬರುವುದಲ್ಲದೆ ಎಲ್ಲ ಕಾರ್ಯಕ್ರಮಗಳು ಹಾಗೂ ಸಮಾರಂಭಗಳಲ್ಲಿ ಭಾಗವಹಿಸುವ ಪದ್ಧತಿ ಇಟ್ಟುಕೊಂಡಿದ್ದರು. ಆ ಎಲ್ಲ ಕಾರ್ಯಕ್ರಮಗಳನ್ನು ಚಾಚೂ ತಪ್ಪದೆ ಮುಂದುವರಿಸಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಅನ್ನದಾನಯ್ಯಶಾಸ್ತ್ರಿ, ಹಾಲಸ್ವಾಮಿ, ಗಂಗಯ್ಯ ಪೌರೋಹಿತ್ಯ ವಹಿಸಿದ್ದರು. ಸೋಮವಾರದ ವಿಶೇಷ ಸೇವಾರ್ಥಿಗಳಾಗಿ ಪುಷ್ಪಲತಾ ಎಂ.ಪಿ.ಎಂ.ವಿಜಯಾನಂದ ಕುಮಾರಸ್ವಾಮಿ ಮತ್ತಿತರರು ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net