ಸಂಭ್ರಮದ ಚನ್ನಪ್ಪಸ್ವಾಮಿ ಮಹಾರಥೋತ್ಸವ

honnalli hirekalmatha
Published on

ಹೊನ್ನಾಳಿ ಹಿರೇಕಲ್ಮಠದಲ್ಲಿ ಶ್ರಾವಣ ಮಾಸ I ಲಿಂ. ಶ್ರೀಗಳ ಕರ್ತೃ ಗದ್ದುಗೆಗಳಿಗೆ ಪೂಜೆ

ಹೊನ್ನಾಳಿ: ಮಧ್ಯ ಕರ್ನಾಟಕದ ಐತಿಹಾಸಿಕ ಶ್ರೀ ಚನ್ನಪ್ಪಸ್ವಾಮಿ ಮಹಾ ರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

ಹೊನ್ನಾಳಿಯ ಪುಣ್ಯಕ್ಷೇತ್ರ ಶ್ರೀ ಚನ್ನಪ್ಪ ಸ್ವಾಮೀಜಿ ಹಿರೇಕಲ್ಮಠದಲ್ಲಿ ಶ್ರಾವಣ ಮಾಸದ ಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದು, ಶುಕ್ರವಾರ ಮಹಾರಥೋತ್ಸವ ನೆರವೇರಿತು. ಶ್ರೀ ಮಠದ ದ್ವಾರದ ಮುಂಭಾಗದಿಂದ ಪಟ್ಟಣದ ವೀರ ಸಂಗೋಳ್ಳಿ ರಾಯಣ್ಣ ವೃತ್ತದವರೆಗೆ ಭಕ್ತರು ತೇರು ಎಳೆದು ಪುನೀತರಾದರು.

ಪ್ರಾತಃಕಾಲದಲ್ಲೇ ಪೀಠಾಧ್ಯಕ್ಷ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಲಿಂಗೈಕ್ಯ ಒಡೆಯರ್ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಶ್ರೀ ಒಡೆಯರ್ ಚಂದ್ರಶೇಖರ್ ಶಿವಾಚಾರ್ಯ ಶ್ರೀಗಳ ಕರ್ತೃಗದ್ದುಗೆಗಳಿಗೆ ಹಾಗೂ ಶ್ರೀ ವೀರಭದ್ರೇಶ್ವರ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ದೀಪೋತ್ಸವ, ಮಂಗಳಾರತಿ, ಪೂಜೆಗಳು ನೆರವೇರಿದವು.

ಬೆಳಗ್ಗೆ ಶ್ರೀ ಮಠದ ಮುಂಭಾಗ ವೀರಭದ್ರೇಶ್ವರ ಕೆಂಡದಾರ್ಚನೆ ನಡೆಯಿತು. 12ಕ್ಕೆ ಹಿರೇಕಲ್ಮಠದ ಪೀಠಾಧ್ಯಕ್ಷ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರನ್ನು ಕುದುರೆಯಲ್ಲಿ ಕೂರಿಸಿ ಶ್ರೀ ಮಠದಿಂದ ಮಂಗಳವಾದ್ಯದದೊಂದಿಗೆ ಮಠದ ದ್ವಾರದ ವರೆಗೆ ಕರೆತರಲಾಯಿತು.

ನಂತರ ಪಂಚಪೀಠದ ಧ್ವಜ, ಪುಷ್ಪಗಳಿಂದ ಅಲಂಕೃತಗೊಂಡಿದ್ದ ಶ್ರೀ ಚನ್ನಪ್ಪ ಸ್ವಾಮೀಜಿ ರಥೋತ್ಸವಕ್ಕೆ ಪುರೋಹಿತರು ವೇದಮಂತ್ರಗಳ ಘೋಷಣೆಯೊಂದಿಗೆ ಮಹಾಪೂಜೆ, ರಥದ ಗಾಲಿಗೆ ಬಲಿ ಅನ್ನ ಮತ್ತಿತರ ಧಾರ್ಮಿಕ ಪೂಜೆಗಳು ನಡೆದವು.

ಸ್ವಾಮೀಜಿ ರಥಾರೋಹಣ ಗೈಯುತ್ತಿದ್ದಂತೆಯೇ ನೆರೆದಿದ್ದ ಸಾವಿರಾರು ಭಕ್ತರು ಜೈಕಾರ ಹಾಕಿದರು. ಹಿರೇಕಲ್ಮಠದ ಚನ್ನಯ್ಯ ಬೆನ್ನೂರುಮಠ, ಪುರಸಭಾ ಸದಸ್ಯ ಹೊಸಕೇರಿ ಸುರೇಶ್, ನಿವೃತ್ತ ಶಿಕ್ಷಕ ರುದ್ರಯ್ಯ, ಶಾಸ್ತ ಭಾರತ್ ಗ್ಯಾಸ್ ಮಾಲೀಕ ಶಿವಕುಮಾರ್, ಎಚ್.ಸಿ.ರವಿಕುಮಾರ್, ಕೆ.ಜಿ.ರುದ್ರಪ್ಪ, ರಾಜು ಪಲ್ಲವಿ, ಪೇಟೆ ಪ್ರಶಾಂತ ಹಾಗೂ ಪತ್ರಕರ್ತ ಸುರೇಶ್ ಪಾಲ್ಗೊಂಡಿದ್ದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಗಮಿಸಿ, ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಶ್ರೀಗಳಿಂದ ಆಶೀರ್ವಾದ ಪಡೆದರು. ಶ್ರೀ ಚನ್ನಪ್ಪಸ್ವಾಮಿ ರಥೋತ್ಸವದ ಸಂದರ್ಭದಲ್ಲಿ ಕೀಲುಕುದುರೆ, ನಂದಿಕುಣಿತ ಮತ್ತಿತರ ಸಾಂಸ್ಕೃತಿಕ ಮೇಳಗಳು ಭಕ್ತರನ್ನು ರಂಜಿಸಿದವು.

ನಾಡಿನಾದ್ಯಂತ ಆಗಮಿಸಿದ್ದ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತು. ಗೋದಿ ಹುಗ್ಗಿ, ಕಡ್ಲೆಕಾಳು ಪಲ್ಯ, ಅನ್ನಸಾಂಬರ್ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 10 ಸಾವಿರ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net