ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಸಕಲ ಸೌಲಭ್ಯ

Honnali, Government School, Uniform,
Published on

ಕ್ಷೇತ್ರ ಶಿಕ್ಷಣಾಧಿಕಾರಿ ನಿಂಗಪ್ಪ ಹೇಳಿಕೆ l ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ಹೊನ್ನಾಳಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಸಿಗುತ್ತಿರುವ ಸೌಲಭ್ಯ ಬೇರೆ ಎಲ್ಲೂ ಸಿಗುತ್ತಿಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದಿರುವ ಮಕ್ಕಳ ಸಂಖ್ಯೆಯೂ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಿಂಗಪ್ಪ ತಿಳಿಸಿದರು.

ಪಟ್ಟಣದ ಟಿ.ಬಿ. ವೃತ್ತದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಪ್ರಾರಂಭವಾಗಿರುವ ಎಲ್‌ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ನಿವೃತ್ತ ಮುಖ್ಯಶಿಕ್ಷಕ ರುದ್ರಯ್ಯ ಅವರು ನೀಡಿದ ಸಮವಸ್ತ್ರಗಳನ್ನು ಬುಧವಾರ ವಿತರಿಸಿ, ಮಾತನಾಡಿದರು.

ಸರ್ಕಾರ ಶಿಕ್ಷಣ ಇಲಾಖೆಗೆ ಅತ್ಯಧಿಕ ಅನುದಾನ ನೀಡಿ ಮಕ್ಕಳಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಎಲ್ಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಶಿಕ್ಷಣ ಪಡೆದುಕೊಳ್ಳಬೇಕು. ಶಿಥಿಲಗೊಂಡಿರುವ ಶಾಲಾ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸಬಾರದು. ಉತ್ತಮ ಕೋಣೆಗಳಲ್ಲಿ ಶಿಕ್ಷಣ ನೀಡುವಂತೆ ಮುಖ್ಯಶಿಕ್ಷಕರಿಗೆ ಸೂಚಿಸಲಾಗಿದೆ ಎಂದರು.

ಇದೇ ಶಾಲೆಯಲ್ಲಿ ನಿವೃತ್ತರಾಗಿರುವ ರುದ್ರಯ್ಯ ಅವರು ಈಗಲೂ ಈ ಶಾಲೆ ಹಾಗೂ ಮಕ್ಕಳ ಬಗ್ಗೆ ಅತೀವ ಕಾಳಜಿ, ಪ್ರೀತಿ ಇರಿಸಿಕೊಂಡಿದ್ದಾರೆ. ನಮಗೂ ಸಲಹೆ, ಸಹಕಾರ ನೀಡುತ್ತಿದ್ದಾರೆ ಎಂದರು.

ನಿವೃತ್ತ ಮುಖ್ಯಶಿಕ್ಷಕ ರುದ್ರಯ್ಯ ಮಾತನಾಡಿ, ಶಾಲೆಯಲ್ಲಿ ಮಕ್ಕಳು ಸಂಸ್ಕಾರವಂತರಾಗಿ ಸನ್ಮಾರ್ಗದಲ್ಲಿ ನಡೆದರೆ ಅವರ ಪಾಲಕರು ನಮ್ಮ ಬಗ್ಗೆ ಗೌರವಾದರ ಮಾತುಗಳನ್ನಾಡುತ್ತಾರೆ. ಆದ್ದರಿಂದ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಬೇಕುಎಂದು ಮನವಿ ಮಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ನವೀನ್‌ಕುಮಾರ್, ಮುಖ್ಯಶಿಕ್ಷಕ ಮಂಜನಾಯ್ಕ, ಶಿಕ್ಷಕರಾದ ಸುರೇಶ್, ಕೊಟ್ರೇಶ್, ಸರೋಜಮ್ಮ, ಸುಮಲತಾ, ಮಹೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net