

ಹೊನ್ನಾಳಿ: ಪ್ರಸ್ತುತ ರೈತ ಸಮುದಾಯ ಸಂಕಷ್ಟದಲ್ಲಿದ್ದು, ಅವರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ರೈತ ಸಂಘಟನೆಗಳು ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಹೋರಾಟ ನಡೆಸಬೇಕಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಕೆ.ಸಿ.ಬಸಪ್ಪ ಹೇಳಿದರು.
ಹಿರೇಕಲ್ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಂದಾಯ, ಕೃಷಿ, ತೋಟಗಾರಿಕೆ ಮತ್ತಿತರ ಇಲಾಖೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿ ರೈತರಿಗೆ ನ್ಯಾಯ ಸಿಗದಂತಾಗಿದೆ. ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗದೆ ರೈತರು ಸಂಕಷ್ಟದಲ್ಲಿದೆ. ಆದ್ದರಿಂದ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ನ್ಯಾಮತಿ ತಾಲೂಕು ರೈತ ಸಂಘದ ಅಧ್ಯಕ್ಷ ಬೆಳಗುತ್ತಿ ಉಮೇಶ್ ಮಾತನಾಡಿ, ಸಾಮಾನ್ಯವಾಗಿ ಎಲ್ಲ ರಾಜಕೀಯ ಪಕ್ಷಗಳು ರೈತರು ಸಂಘಟನೆ ಆಗದಂತೆ ನೋಡಿಕೊಂಡು ಒಡೆದು ಆಳುವ ನೀತಿ ಅನುಸರಿಸಿಕೊಂಡು ಬರುತ್ತಿವೆ ಎಂದು ಹೇಳಿದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸುಂಕದಕಟ್ಟೆ ಕರಿಸಬಸಪ್ಪ, ಮುಖಂಡರಾದ ಗೋಪಾಲಪ್ಪ, ಹಿರೇಮಠದ ಬಸವರಾಜಪ್ಪ, ಬಸವರಾಜಪ್ಪ ಹೊಳೆಹರಳಹಳ್ಳಿ, ನರಸಿಂಹಪ್ಪ, ಮುರುಗೇಶಪ್ಪ ಜೋಗ, ಜಿಲ್ಲಾ ಕಾರ್ಯದರ್ಶಿ ಸುಂಕದಕಟ್ಟೆ ಕರಿಸಬಸಪ್ಪ, ಬೆಳಗುತ್ತಿ ನಾಗರಾಜಪ್ಪ, ಹನುಮಂತಪ್ಪ ನಾಯ್ಕ, ನೀಲಕಂಠ ರಾಯ್ಕರ್, ಶ್ರೀನಿವಾಸ್, ಕೃಷ್ಣಪ್ಪ, ನಾರಾಯಣಮೂರ್ತಿ, ಯೋಗೇಶ್, ಚನ್ನೇಶ್, ಆನಂದಪ್ಪ, ಪರಮೇಶ್ವರಪ್ಪ ಇತರರಿದ್ದರು.