ಧರ್ಮಾಚರಣೆಯಿಂದ ಸಾವಿರ ಸಮಸ್ಯೆ ದೂರ

DVG_hnl raghavendra mutta nov 5
Published on

ಹೊನ್ನಾಳಿ: ಪ್ರಸ್ತುತ ವಿಶ್ವವನ್ನು ಕಾಡುತ್ತಿರುವ ನೂರಾರು ಸಮಸ್ಯೆಗಳಿಗೆ ಏಕೈಕ ಪರಿಹಾರ ಎಂದರೆ ಧರ್ಮಾಚರಣೆ ಎಂದು ಕೂಡಲಿ ಆರ್ಯ ಅಕ್ಷೋಭ್ಯ ತೀರ್ಥ ಮಠದ ಶ್ರೀ ರಘುವಿಜಯ ಸ್ವಾಮೀಜಿ ತಿಳಿಸಿದರು.

ದ್ವಿತೀಯ ಮಂತ್ರಾಲಯವೆಂದು ಖ್ಯಾತಿ ಪಡೆದಿರುವ ಹೊನ್ನಾಳಿಯ ರಾಯರ ಮಠದಲ್ಲಿ ಭಕ್ತರು ಗುರುವಾರ ಆಯೋಜಿಸಿದ್ದ ಗುರುವಂದನ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಬಹುತೇಕ ಮರೆತ ಕಾರಣ ಕರೊನಾದಂತಹ ಅನೇಕ ಸಮಸ್ಯೆಗಳು, ಹತ್ತಾರು ದೈಹಿಕ ಹಾಗೂ ಮಾನಸಿಕ ವ್ಯಾಧಿಗಳು ಕಾಡುತ್ತಿವೆ. ಧರ್ಮದಲ್ಲಿ ತಿಳಿಸಿರುವ ಆಚರಣೆ ಪಾಲಿಸಿ ಜೀವನವನ್ನು ಸುಖವಾಗಿ ಅನುಭವಿಸಬೇಕು ಎಂದರು.

ದೇವರು ಎಲ್ಲರಿಗೂ ಆಸ್ತಿಕ್ಯ, ಬುದ್ಧಿ ಕರುಣಿಸಬೇಕು. ಇದರಿಂದ ದೇಶ ಮತ್ತು ಲೋಕಕ್ಕೆ ಒಳಿತಾಗಬೇಕು. ಇದಕ್ಕೆ ನಮ್ಮ ನಡವಳಿಕೆಗಳು ಪೂರಕವಾಗಿರಬೇಕು ಎಂದರು.

ಇಂದು ನಮ್ಮ 70ನೇ ವರ್ಧಂತಿಯನ್ನು ಅತ್ಯಂತ ಭಕ್ತಿಯಿಂದ ನೆರವೇರಿಸಿದ್ದಾರೆ. ಇದೆಲ್ಲವನ್ನು ನನ್ನ ಉಪಾಸ್ಯ ಮೂರ್ತಿಯಾದ ಶ್ರೀ ವೈಕುಂಠ ರಾಮದೇವರಿಗೆ ಸಮರ್ಪಣೆ ಮಾಡಿದ್ದೇವೆ. ಭಕ್ತರೆಲ್ಲರೂ ಸುಸಂಸ್ಕೃತರಾಗಲಿ, ನಮ್ಮ ನಾಡು, ದೇಶ ಮತ್ತು ವಿಶ್ವ ಎಲ್ಲ ರೀತಿಯ ಸಮಸ್ಯೆಗಳಿಂದ ಮುಕ್ತವಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇವೆ ಎಂದು ತಿಳಿಸಿದರು.

ಬೆಳಗಿನ ಅವಧಿಯಲ್ಲಿ ಮಾರ್ಕಂಡೇಯ, ಮೃತ್ಯುಂಜಯ, ಸಾಧನಾ ಕಾಮ್ಯಾರ್ಥ ಇಷ್ಟಿ ಹೋಮಗಳು ರಾಯರಮಠದಲ್ಲಿ ನಡೆದವು. ಶ್ರೀಗಳು ಸಂಸ್ಥಾನಪೂಜೆ ನೆರವೇರಿಸಿದರು. ಮಠದ ಆವರಣದಲ್ಲೇ ರಾಯರ ಬೆಳ್ಳಿ ರಥೋತ್ಸವ ಜರುಗಿತು.

ಕಲ್ಲಾಪುರ ಜಯತೀರ್ಥಾಚಾರ್, ಬಾಳಗಾರು ಜಯತೀರ್ಥಾಚಾರ್ ಅಗ್ನಿಹೋತ್ರಿಗಳ ನೇತೃತ್ವ ವಹಿಸಿದ್ದರು. ಮತ್ತೂರಿನ ಋತ್ವಿಜರು ಉಪಸ್ಥಿತರಿದ್ದರು. ಶ್ರೀ ರಾಘವೇಂದ್ರ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ವಾದಿರಾಜ್ ಮತ್ತಿತರರಿದ್ದರು.

ಮಿತ ಆಹಾರ, ದೇವರಲ್ಲಿ ಅಚಲ ವಿಶ್ವಾಸ, ಧರ್ಮದ ಬಗ್ಗೆ ಶ್ರದ್ಧೆ ಇದ್ದರೆ ಯಾವ ಸಮಸ್ಯೆಯೂ ನಮ್ಮನ್ನು ಕಾಡುವುದಿಲ್ಲ.
> ಶ್ರೀ ರಘುವಿಜಯ ಸ್ವಾಮೀಜಿ, ಕೂಡಲಿಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net