

ಹೊನ್ನಾಳಿ: ಬಿಜೆಪಿ ಮಾಡುತ್ತಿರುವ ಭ್ರಷ್ಟಾಚಾರ ಮಿತಿ ಮೀರಿರುವುದರಿಂದ ರಾಜ್ಯದ ಜನತೆ ಈ ಬಾರಿ ಹೊನ್ನಾಳಿ ಸೇರಿ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವ ವಿಶ್ವಾಸವಿದೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ತಾಲೂಕಿನ ಬಲಮುರಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಚೇರಿ ಉದ್ಘಾಟನೆ ಹಾಗೂ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅವಳಿ ತಾಲೂಕಿನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಚಿಕ್ಕ ವಿಷಯಗಳಿಗೂ ರಾಜಕೀಯ ಹಸ್ತಕ್ಷೇಪ ಮಾಡುತ್ತಿರುವ ಶಾಸಕರ ಕಾರ್ಯ ವೈಖರಿ ಸರಿಯಿಲ್ಲ ಎಂದರು.
ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ತಾಲೂಕಿನ ಬಲಮುರಿಯಂತಹ ಸಣ್ಣ ಗ್ರಾಮದ ಯುವಕರು ಸ್ವಯಂ ಪ್ರೇರಣೆಯಿಂದ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಜತೆಗೆ ಪಕ್ಷದ ಕಚೇರಿ ಆರಂಭಿಸುತ್ತಿರುವುದು ರಾಜ್ಯದಲ್ಲಿಯೇ ಪ್ರಥಮವಾಗಿದೆ. ಇದು ಶುಭ ಲಕ್ಷಣ ಎಂದು ಹೇಳಿದರು.
ರಾಹುಲ್ ಗಾಂಧಿ 3570 ಕಿ.ಮೀ. ಪಾದಯಾತ್ರೆ ಮಾಡುವ ಮೂಲಕ ಭಾರತ್ ಜೋಡೋ ಕಾರ್ಯಕ್ರಮದೊಂದಿಗೆ ಪಕ್ಷ ಸಂಘಟನೆ ಕೈಗೊಡಿದ್ದಾರೆ. ಭಾರತ್ ಜೋಡೋ ಪಾದಯಾತ್ರೆ ಕಾರ್ಯಕ್ರಮಕ್ಕೆ ಇಡೀ ದೇಶ ಸ್ಪಂದಿಸುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಯುವಕರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.
ಹೊನ್ನಾಳಿ ಬ್ಲಾಕ್ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಹಿರಿಯ ಮುಖಂಡ ಬಿ.ಸಿದ್ದಪ್ಪ, ರಾಜ್ಯ ಹಿಂದುಳಿದ ವರ್ಗಗಳ ಮುಖಂಡ ಎಚ್.ಎ.ಉಮಾಪತಿ, ಕೆಪಿಸಿಸಿ ಸದಸ್ಯ ಡಾ.ಈಶ್ವರನಾಯ್ಕ, ಜಿಪಂ ಮಾಜಿ ಸದಸ್ಯ ಡಿ.ಜಿ. ವಿಶ್ವನಾಥ್, ಆರ್.ನಾಗಪ್ಪ, ಪ್ರಶಾಂತ್ ಬಣ್ಣಜ್ಜಿ, ರಂಜಿತ್, ರುದ್ರೇಶ್ ಕೊಡತಾಳ್, ಹನುಮನಹಳ್ಳಿ ಬಸವರಾಜಪ್ಪ ಇತರರಿದ್ದರು.