

ಹೊನ್ನಾಳಿ: ತೈಲ ಬೆಲೆ ಏರಿಕೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಮಂಗಳವಾರ ತಾಲೂಕು ಬ್ಲಾಕ್ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಏರಿಕೆ ಮಾಡುತ್ತಿದ್ದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಬಂದ ಕೂಡಲೇ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿತು. ಇದರಿಂದ ಸಣ್ಣ ವ್ಯಾಪಾರಿಗಳು, ಉದ್ಯಮದಾರರಿಗೆ ತೀವ್ರ ತೊಂದರೆಯಾಯಿತು. ಈಗ ಇಂಧನ ದರ ಏರಿಕೆ ಸಮರ ಶುರುವಾಗಿದ್ದು ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ತಿಳಿಯದಾಗಿದೆ ಎಂದರು.
ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ನಡೆಸಿರುವ ಹಗರಣಗಳ ಪಟ್ಟಿ ದೊಡ್ಡದಿದೆ. ಅವರು ಎಷ್ಟು ಭ್ರಷ್ಟ ಎಂಬುದು ತಾಲೂಕಿನ ಜನತೆಗೆ ತಿಳಿಸಬೇಕಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಗ್ರಂಥವೊಂದನ್ನು ಹೊರತರಲಾಗುವುದು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿದರು.
ಜಿಪಂ ಸದಸ್ಯ ಡಿ.ಜಿ. ವಿಶ್ವನಾಥ್, ತಾಪಂ ಸದಸ್ಯ ಅಬೀದಲಿಖಾನ್, ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಪಿಕಾರ್ಡ್ ನಿರ್ದೇಶಕ ರಮೇಶಗೌಡ, ಎಪಿಎಂಸಿ ನಿರ್ದೇಶಕ ದಿಡಗೂರು ಪ್ರಕಾಶ್, ಸಾಸ್ವೆಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ. ಗದ್ದಿಗೇಶ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮಧುಗೌಡ ಇತರರು ಪ್ರತಿಭಟನೆಯಲ್ಲಿದ್ದರು.