

ಹೊನ್ನಾಳಿ : ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆ ಅನಾವರಣಕ್ಕೆ ಉಪನ್ಯಾಸಕರು ಶ್ರಮಿಸಬೇಕು ಎಂದು ನಿವೃತ್ತ ಪ್ರಾಚಾರ್ಯ ಎಂ. ಶಿವಶಂಕರಯ್ಯ ಸಲಹೆ ನೀಡಿದರು.
ಇಲ್ಲಿನ ಟಿ.ಬಿ. ವೃತ್ತದ ಸರ್ಕಾರಿ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಪಾಲಕರು, ಬೋಧಕರು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ವಿದ್ಯಾರ್ಥಿಗಳು ಕಠಿಣ ಅಧ್ಯಯನ ಮಾಡಬೇಕು. ಇರುವ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಿವಮೊಗ್ಗದ ಉಪನ್ಯಾಸಕ ಗುಡ್ಡಪ್ಪ ಎಫ್. ಕುಟ್ರಿ ಮಾತನಾಡಿ, ಹಿರಿಯರು ಹೇಳುವ ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲೂ ರೂಢಿಸಿಕೊಳ್ಳಬೇಕು. ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುವ ಬದಲು ಮಾತೃಭಾಷೆ ಕನ್ನಡದಲ್ಲೇ ಕೊಡಿಸಿದರೆ ಕಲಿಕೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ದಿಡಗೂರು ತಿಪ್ಪೇಶಪ್ಪ, ಪ್ರಾಚಾರ್ಯ ಕೆ.ಬಿ. ವೇದಮೂರ್ತಿ, ಉಪನ್ಯಾಸಕರಾದ ನಾರಾಯಣ್ ನಾಯ್ಕರ್, ಸುರೇಶ್ ಲಮಾಣಿ, ಎಚ್.ಬಸವರಾಜ್, ಬಿ.ಜೆ. ಸುಪ್ರಿಯಾ, ಸುಮತಿ ಗಿರಿಧರ್ ಮಾತನಾಡಿದರು.