

ಹೊನ್ನಾಳಿ: ಒಕ್ಕಲಿಗ ಒಕ್ಕದಿರೆ ಬಿಕ್ಕುವುದು ಜಗವೆಲ್ಲ ಎಂಬ ಮಾತನ್ನು ಸದಾಕಾಲ ಸ್ಮರಣೆಯಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಕೋಟಿಗಟ್ಟಲೆ ಹಣ ಇದ್ದರೂ ತುತ್ತು ಅನ್ನಕ್ಕೆ ಪರದಾಡಬೇಕಾಗುತ್ತದೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.
ತಾಲೂಕಿನ ಹಿರೇಕಲ್ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಲಿಂಗೈಕ್ಯ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿಯವರ 55ನೇ ವಾರ್ಷಿಕ ಪುಣ್ಯಾರಾಧನೆ ಹಾಗೂ ಲಿಂಗೈಕ್ಯ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ 10 ನೇ ವಾರ್ಷಿಕ ಸಂಸ್ಮರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ದೇಶದ ಯಾವುದೇ ಭಾಗಕ್ಕೆ ಹೋದರೂ ರೈತರಿಗೆ ಕನ್ಯಾ ಸಿಗುತ್ತಿಲ್ಲ, ಕನ್ಯಾ ಪಾಲಕರು ವರನ ಕಡೆಯವರ ಮುಂದೆ ಸಾಕಷ್ಟು ಬೇಡಿಕೆ ಇಡುತ್ತಿದ್ದಾರೆ. ರೈತರಿಗೆ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ. ಇದು ಮುಂದೆ ಬಹಳ ಸಮಸ್ಯೆಗಳಿಗೆ ದಾರಿ ಮಾಡಿ ಕೊಡುತ್ತದೆ. ಈ ಬಗ್ಗೆ ಎಲ್ಲರೂ ಗಂಭೀರವಾಗಿ ಯೋಚಿಸಬೇಕು ಎಂದರು.
ಶ್ರೀಮಠ ಮಾನ್ಯಗಳು ಧಾರ್ವಿುಕ ಕಾರ್ಯಗಳ ಜತೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲ್ಲರನ್ನು ಸಂಸ್ಕಾರವಂತರನ್ನಾಗಿ ಮಾಡಿ ಸನ್ಮಾರ್ಗದಲ್ಲಿ ಕೊಂಡೊಯ್ಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದಕ್ಕೆ ಭಕ್ತರು ಸಹ ಶ್ರಮಿಸುತ್ತಿದ್ದಾರೆ ಎಂದರು.
ಬಿಳಿಕಿ ಮಠದ ರಾಚೋಟೇಶ್ವರ ಶಿವಾಚಾರ್ಯ ಶ್ರೀ ಮಾತನಾಡಿ, ಹೊನ್ನಾಳಿಯ ಹಿರೇಕಲ್ಮಠವು ಎರಡನೇ ಶ್ರೀಶೈಲ ಮಠ ಎಂದು ಖ್ಯಾತಿ ಪಡೆದಿದೆ. ಸಿದ್ಧಗಂಗಾ ಕ್ಷೇತ್ರದ ಲಿಂ.ಡಾ.ಶಿವಕುಮಾರ ಸ್ವಾಮಿಗಳನ್ನು ಹೊರತುಪಡಿಸಿ ಮಧ್ಯ ಕರ್ನಾಟಕದಲ್ಲಿ ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಶ್ರೀಗಳನ್ನೇ ನಡೆದಾಡುವ ದೇವರೆಂದು ಕರೆಯುತ್ತಿದ್ದಾರೆ ಎಂದು ತಿಳಿಸಿದರು.
ಹಿರೇಮಲ್ಲನಕೇರಿ ಶ್ರೀಮಠದ ಅಭಿನವ ಚನ್ನಬಸವ ಶ್ರೀ ಮಾತನಾಡಿ, ಸಂಗೀತದಿಂದ ಮನಸ್ಸಿಗೆ ಆನಂದ, ಆತ್ಮಕ್ಕೆ ಮುದ ನೀಡುವುದಲ್ಲದೆ ಜೀವನದಲ್ಲಿ ಶಾಂತಿಯೂ ನೆಲೆಸುತ್ತದೆ. ಅಂತಹ ಸಂಗೀತಕ್ಕೆ ಮಠದಲ್ಲಿ ಅಂದಿನಿಂದ ಇಂದಿನವರೆವಿಗೂ ಪೋ›ತ್ಸಾಹ ನೀಡುತ್ತ ಬರಲಾಗಿದೆ ಎಂದು ಹೇಳಿದರು.
ರಟ್ಟೆಹಳ್ಳಿಯ ಶಿವಲಿಂಗ ಶಿವಾಚಾರ್ಯ ಶ್ರೀ ಮಾತನಾಡಿ, ಪಾಲಕರು ಸಂಸ್ಕಾರ ಹಾಗೂ ಸನ್ಮಾರ್ಗದಲ್ಲಿರುವ ವಿದ್ಯಾವಂತ ಯುವ ರೈತರಿಗೆ ಕನ್ಯಾಮಣಿಗಳನ್ನು ಕೊಟ್ಟು ವಿವಾಹ ಮಾಡಿ, ಬದುಕು ಸುಂದರವಾಗಿರುತ್ತದೆ ಎಂದರು.
ಮುಷ್ಟೂರು ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆವಹಿಸಿ ಮಾತನಾಡಿ, ಮನುಷ್ಯನಲ್ಲಿ ಧಾರ್ವಿುಕ ನಂಬಿಕೆಗಳು ಕಡಿಮೆಯಾಗುತ್ತಿದ್ದು ಇದು ಎಲ್ಲ ರೀತಿಯ ದುಃಖಗಳಿಗೆ ಕಾರಣವಾಗಿದೆ ಎಂದು ಹೇಳಿದರು.
ಬೃಹನ್ಮಠದ ರಾಂಪುರದ ಶಿವಕುಮಾರ ಹಾಲಸ್ವಾಮಿ, ಗೋವಿನಕೋವಿ ವಿಶ್ವಾರಾಧ್ಯ ಮಹಾಲಿಂಗಸ್ವಾಮಿ, ಮೈಸೂರಿನ ಸುಜ್ಞಾನದೇವ ಶಿವಾಚಾರ್ಯ, ಪ್ರಮುಖರಾದ ಪಟ್ಟಣಶೆಟ್ಟಿ ಪರಮೇಶ್, ಎಚ್.ಎ. ಉಮಾಪತಿ, ಹೊಸಕೇರಿ ಸುರೇಶ್, ಪುರಸಭೆ ಅಧ್ಯಕ್ಷ ಮೈಲಪ್ಪ ಮಾತನಾಡಿದರು.
ಮುಂಡರಗಿ ತಾಲೂಕಿನ ಕೋರ್ಲಹಳ್ಳಿಯ ನಾಗಪ್ಪ ಗಂಗಪ್ಪ ಮಜ್ಜಿಗೆ ಇವರಿಗೆ ಲಿಂ. ಚಂದ್ರಶೇಖರ ಶಿವಾಚಾರ್ಯ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮುಖಂಡರಾದ ಎಂ.ಪಿ. ರಮೇಶ್, ಮಂಜುನಾಥ ಇಂಚರ, ಗದ್ದಿಗೇಶ್, ಸಣ್ಣಕ್ಕಿ ಬಸವನಗೌಡ, ಕುಮಾರಸ್ವಾಮಿ, ಗಂಗಾಧರಯ್ಯ, ಚನ್ನಯ್ಯ ಬೆನ್ನೂರುಮಠ, ರುದ್ರಣ್ಣ, ಶ್ರೀಮಠದ ಚನ್ನಬಸವಯ್ಯ, ವಿಜಯಾನಂದಸ್ವಾಮಿ, ಸರಳಿಮನೆ ಮಂಜಪ್ಪ, ಶಿವಯೋಗಿ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.