ಹಿರಿಯರು ಸಚಿವ ಸ್ಥಾನ ತ್ಯಾಗ ಮಾಡಲಿ: ರೇಣುಕಾಚಾರ್ಯ ಮನವಿ

mp renukacharya
Published on

ಹೊನ್ನಾಳಿ: ರಾಜ್ಯ ಬಿಜೆಪಿ ಸರ್ಕಾರದ ಹಿರಿಯರು ಕುರ್ಚಿಗೆ ಅಂಟಿಕೊಳ್ಳದೆ ಸಚಿವ ಸ್ಥಾನ ತೊರೆದು, ಬೇರೆಯವರಿಗೆ ಅವಕಾಶ ಮಾಡಿಕೊಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾರ್ಯ ಮನವಿ ಮಾಡಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಎಸ್‌ವೈ ಮುಖ್ಯಮಂತ್ರಿ ಪದವಿಯನ್ನೇ ತ್ಯಾಗ ಮಾಡಿ ಬೇರೆಯವರಿಗೆ ಅವಕಾಶ ಕಲ್ಪಿಸಿದ್ದಾರೆ. ಆದರೆ, ಬಹುತೇಕ ಸಚಿವರು ಯಡಿಯೂರಪ್ಪ ಮಾರ್ಗದ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದಾರೆ. ವಿಧಾನಸೌಧದ ಮೂರನೇ ಮಹಡಿ ಮಾತ್ರ ಸೀಮಿತವಾಗಿದ್ದಾರೆ ಎಂದು ಬೇಸರಿಸಿದರು.

ಪಕ್ಷಕ್ಕೆ ಮುಜುಗರ ತರುವ ಕೆಲಸ ಇನ್ನಾದರೂ ಮಾಡಬಾರದು. ವೇಗದೂತರಂತೆ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಕೆಲ ಸಚಿವರು ಕ್ಷೇತ್ರಕ್ಕೆ ಸೀಮಿತರಾಗಿದ್ದಾರೆ. ಅಂತಹವರಿಗೆ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಿವಿಮಾತು ಹೇಳಿದ್ದು, ಇದು ತಪ್ಪಲ್ಲ. ಮಾರ್ಗದರ್ಶನ ಮಾಡುವ ಅಧಿಕಾರ ಸಂಘಕ್ಕೆ ಇದೆ ಎಂದ ಅವರು, ಪಕ್ಷದಲ್ಲಿ ಹೊಂದಾಣಿಕೆ ರಾಜಕಾರಣಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬಸವರಾಜ್ ಬೊಮ್ಮಾಯಿ ಸಿಎಂ ಆಗಿ ಒಂದು ವರ್ಷವಾಗುತ್ತಿದ್ದು, ರಾಜ್ಯ ಸರ್ಕಾರದ ಸಾಧನೆ ತಿಳಿಸಲು ಸಾಧನಾ ಸಮಾವೇಶ ಹಮ್ಮಿಕೊಳ್ಳುತ್ತಿದ್ದು, ಇದು ವ್ಯಕ್ತಿ ಪೂಜೆಯಲ್ಲ. ಬಿಜೆಪಿ ಆರಾಧನೆ ಎಂದರು. ಕಾಂಗ್ರೆಸ್ ಪಕ್ಷದವರು ಯಾವ ಉತ್ಸವ ಮಾಡಿದರೂ ನಮಗೆ ಚಿಂತೆ ಇಲ್ಲ. ವಿಳಾಸವೇ ಇಲ್ಲದ ಪಕ್ಷದಲ್ಲಿ ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಮುಖ್ಯಮಂತ್ರಿ ಪದವಿಗಾಗಿ ಸಂಘರ್ಷ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net