

ಹೊನ್ನಾಳಿ: ನಾಗಮಂಗಲದ ಗಣೇಶ ವಿಸರ್ಜನೆ ಪ್ರಕರಣದ ನೈತಿಕ ಹೊಣೆ ಹೊತ್ತು ಗೃಹ ಸಚಿವ ಜಿ.ಪರಮೇಶ್ವರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದರು.
ತಾಲೂಕಿನ ಬೇಲಿಮಲ್ಲೂರು ಜಿಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಹಾಗೂ ಹಿಂದು ಜಾಗೃತ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಗಮಂಗಲದಲ್ಲಿ ಪೊಲೀಸರ ಎದುರೇ ಕೆಲವರು ಮಾರಕಾಸ್ತ್ರಗಳಿಂದ ಹಿಂದು ಯುವಕರ ಮೇಲೆ ನಡೆದ ಹಲ್ಲೆ, ದೌರ್ಜನ್ಯ ಖಂಡನೀಯ. ಇದನ್ನು ಗೃಹಸಚಿವರು ಸಣ್ಣ ಘಟನೆ ಎಂದು ಹೇಳಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಘಟನೆಯಲ್ಲಿ ನಷ್ಟ ಅನುಭವಿಸಿದ ಅಂಗಡಿ ಮಾಲೀಕರಿಗೆ, ಸಣ್ಣಪುಟ್ಟ ವ್ಯಾಪಾರಿಗಳಿಗೆ ಸರ್ಕಾರ ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸರ್ಕಾರದ ಅಲ್ಪಸಂಖ್ಯಾತರ ವ್ಯಾಪಕ ಓಲೈಕೆ ಹಾಗೂ ಹಿಂದುಗಳ ಮೇಲಿನ ಹಲ್ಲೆ, ದೌರ್ಜನ್ಯ ನಡೆದಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಹಿಂದುಗಳು ಜಾಗೃತರಾಗದಿದ್ದರೆ ಗಂಡಾಂತರ ತಪ್ಪಿದ್ದಲ್ಲ. ಹಿಂದು ಯುವಕರ ಮೇಲೆ ದೌರ್ಜನ್ಯ ಮಾಡಿದವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಒಂದೂವರೆ ವರ್ಷವಾಗಿದೆ. ಈ ಅಲ್ಪ ಅವಧಿಯಲ್ಲೇ ಇಂತಹ ಸಾಕಷ್ಟು ಪ್ರಕರಣಗಳು ನಡೆದಿವೆ. ಇದೇ ರೀತಿ ಸರ್ಕಾರದಿಂದ ಅಲ್ಪಸಂಖ್ಯಾತರ ತುಷ್ಠೀಕರಣ ಹಾಗೂ ಹಿಂದುಗಳ ಮೇಲೆ ದೌರ್ಜನ್ಯ ನಡೆದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್, ಜಿಪಂ ಮಾಜಿ ಉಪಾಧ್ಯಕ್ಷ ಸುರೇಂದ್ರನಾಯ್ಕ, ತಾಪಂ ಮಾಜಿ ಉಪಾಧ್ಯಕ್ಷ ಸಿ.ಆರ್.ಶಿವಾನಂದ, ಮುಂಖಂಡರಾದ ಎಸ್.ಎಸ್.ಬೀರಪ್ಪ, ಸಿದ್ದಪ್ಪ, ಉಮೇಶ್ ಇತರರು ಇದ್ದರು.