

ಹೊನ್ನಾಳಿ: ದೇಶದಲ್ಲಿ ನೂರಾರು ಪಕ್ಷಗಳಿದ್ದರೂ ಪ್ರಜಾತಂತ್ರ ವ್ಯವಸ್ಥೆಗೆ ಬಲ ತುಂಬಿರುವುದು ಬಿಜೆಪಿ ಮಾತ್ರ ಎಂದು ಬಿಜೆಪಿ ಮುಖಂಡರಾದ ಗಾಯತ್ರಿ ಜಿ.ಎಂ. ಸಿದ್ದೇಶ್ವರ ಅಭಿಪ್ರಾಯಪಟ್ಟರು.
ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಬುಧವಾರ ಸದಸ್ಯತ್ವ ಅಭಿಯಾನ ಉದ್ಘಾಟಿಸಿ, ಮಾತನಾಡಿದರು.
3ನೇ ಬಾರಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಭಾರತವನ್ನು ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿಯಾಗಿಸುವ ಮೂಲಕ ಜಗತ್ತಿನಲ್ಲಿ ಆರ್ಥಿಕವಾಗಿ ಮೂರನೇ ಸ್ಥಾನಕ್ಕೇರಿಸಲು ಪಣತೊಟ್ಟಿದ್ದಾರೆ. ಅವರಿಗೆ ನಾವು ಮತ್ತಷ್ಟು ಬಲ ತುಂಬಬೇಕಿದೆ ಎಂದರು.
ಒಂದು ಪಕ್ಷ ಬಹುಬೇಗನೆ ಸಂಘಟನೆಯಾಗಿ, ಬಲಿಷ್ಠ ಪಕ್ಷವಾಗಿ ಹೊರಹೊಮ್ಮಬೇಕಾದರೆ ಅದಕ್ಕೆ ಕಾರ್ಯಕರ್ತರ ಶ್ರಮ ಕಾರಣ. ಹೀಗಾಗಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬಿಜೆಪಿಯ ಸಂಸದರು, ಶಾಸಕರು ಇದ್ದಾರೆ ಎಂದರು.
ಇಡೀ ರಾಜ್ಯದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ಈ ಬಾರಿ ಜಿಲ್ಲೆಯಲ್ಲಿ ಅತೀ ಹೆಚ್ಚು ಸದಸ್ಯತ್ವ ಹೊಂದಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಪಡಬೇಕು ಎಂದರು.
ಬಿಜೆಪಿ ಮುಖಂಡ ಎ.ಬಿ. ಹನುಮಂತಪ್ಪ ಮಾತನಾಡಿ, ದೇಶದಲ್ಲಿ ರಾಷ್ಟ್ರೀಯತೆ ಹಾಗೂ ಸಿದ್ಧಾಂತಕ್ಕಾಗಿ ಯಾವುದಾದರೂ ಪಕ್ಷ ಇದ್ದರೆ ಅದು ಬಿಜೆಪಿ ಮಾತ್ರ. ದೇಶಭಕ್ತಿ, ಸಂಘ ಪರಿವಾರದ ಸಂಸ್ಕಾರದಿಂದ ಹಿಂದುತ್ವವನ್ನೇ ಉಸಿರಾಗಿಸಿಕೊಂಡು, ಪಕ್ಷಕ್ಕಾಗಿ ದುಡಿದ ಮಹನೀಯರು ಇದ್ದಾರೆ. ಪಕ್ಷಕ್ಕೆ ಕಾರ್ಯಕರ್ತರೆ ಆಧಾರಸ್ತಂಭ. ಮಹನೀಯರು ಕಾರ್ಯಕರ್ತರಾಗಿ ದುಡಿದು, ಪಕ್ಷ ಸಂಘಟಿಸಿ ಮುಂದೆ ಪಕ್ಷದ ಹಲವಾರು ಹುದ್ದೆ ನಿಭಾಯಿಸಿದ್ದಾರೆ ಎಂದರು.
ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ದಾವಣಗೆರೆ ಜಿಲ್ಲೆ ಬಿಜೆಪಿ ಭದ್ರಕೋಟೆಯಾಗಿತ್ತು. ಆದರೆ, ಕೆಲವಾರು ಕಾರಣಗಳಿಂದ ಪಕ್ಷ ಗೆಲ್ಲುವಲ್ಲಿ ವಿಫಲವಾಗಿದೆ. ಮುಂದಿನ ದಿನಗಳಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಪಂ ಮಾಜಿ ಅಧ್ಯಕ್ಷೆ ದೀಪಾ ಜಗದೀಶ್, ಮಾಜಿ ಉಪಾಧ್ಯಕ್ಷ ಕೆ.ವಿ. ಚನ್ನಪ್ಪ, ಮಾಜಿ ಸದಸ್ಯ ಎಂ.ಆರ್. ಮಹೇಶ್, ಜಿಲ್ಲಾ ಬಿಜೆಪಿ ಮುಖಂಡ ಶಾಂತರಾಜ್ ಪಾಟೀಲ್ ಮಾತನಾಡಿದರು. ಬಿಜೆಪಿ ಮುಖಂಡರಾದ ಸಿ.ಕೆ. ರವಿಕುಮಾರ್, ನೆಲಹೊನ್ನೆ ದೇವರಾಜ್, ಯಕ್ಕನಹಳ್ಳಿ ಜಗದೀಶ್ ಇತರರಿದ್ದರು.