

ಹೊನ್ನಾಳಿ: ದೇಶದ ಜನರ ನಿರೀಕ್ಷೆಗೆ ತಕ್ಕಂತೆ ಕೇಂದ್ರ ಸರ್ಕಾರ ಎಲ್ಲ ಕ್ಷೇತ್ರಗಳಲ್ಲೂ ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದು, ಭಾರತ ಆರ್ಥಿಕವಾಗಿ ಸದೃಢ ಹೆಜ್ಜೆ ಇಡುತ್ತಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬಳಿಕ ಸದಸ್ಯತ್ವ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ, ಮಾತನಾಡಿದರು.
ಕಳೆದ ಎರಡು ಬಾರಿ ಮೋದಿ ಪ್ರಧಾನಿಯಾಗಿ ಈಗ 3ನೇ ಸಲ ಆಡಳಿತ ನಡೆಸುತ್ತಿರುವುದಕ್ಕೆ ಇಡೀ ಜಗತ್ತು ಮೆಚ್ಚಿ ಭಾರತದ ಸ್ನೇಹ ಬೆಳೆಸಲು ಸಾಲಿನಲ್ಲಿ ನಿಂತಿವೆ. ಇದಕ್ಕೆ ಕಾರಣ ಮೋದಿ ಅವರ ಅಭಿವೃದ್ಧಿಪರ ಆಡಳಿತ ಎಂದರು.
ಬಿಜೆಪಿ ಕೇವಲ ಗೆಲುವನ್ನಷ್ಟೇ ನೋಡದೆ ಅನೇಕ ಚುನಾವಣೆಗಳಲ್ಲಿ ಸೋಲನ್ನೂ ಕಂಡಿದೆ. ಹಾಗಾಗಿ, ಬಿಜೆಪಿಗೆ ಸೋಲು ಹೊಸ ವಿಷಯವಲ್ಲ. ಒಂದು ಕಾಲಕ್ಕೆ ಎರಡಂಕಿ ಮತಗಳಷ್ಟೇ ಕೆಲವು ಕ್ಷೇತ್ರಗಳಲ್ಲಿ ಬರುತ್ತಿತ್ತು. ಆದರೆ, ಇಂದು ಹಲವು ರಾಜ್ಯಗಳಲ್ಲಿ ಪಕ್ಷ ಅಧಿಕಾರದಲ್ಲಿದೆ. ಇದಕ್ಕೆ ಕಾರಣ ಪಕ್ಷದ ಕಾರ್ಯಕರ್ತರ ಆತ್ಮವಿಶ್ವಾಸ ಎಂದು ಹೇಳಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ. ಸುರೇಶ್ ಮಾತನಾಡಿ, ತಾಲೂಕಿನಲ್ಲಿ ಅತೀ ಹೆಚ್ಚು ಸದಸ್ಯತ್ವ ಮಾಡಿಸೋಣ. ಅದಕ್ಕಾಗಿ ಬಿಜೆಪಿ ಕಾರ್ಯಕರ್ತರು ಸಮಯ ಬಿಡುವು ಮಾಡಿಕೊಳ್ಳಬೇಕು. ಪ್ರತಿ ಗ್ರಾಮದ ಮನೆ ಮನೆಗೂ ಭೇಟಿ ನೀಡಿ, ಗ್ರಾಮದ ಸಮಸ್ಯೆ ಪಟ್ಟಿ ಮಾಡಿಕೊಂಡು ಬನ್ನಿ. ಅವುಗಳನ್ನಿಟ್ಟುಕೊಂಡು ಪ್ರತಿಭಟನೆ ಮಾಡಿ ಸರ್ಕಾರದ ಕಣ್ಣು ತೆರೆಸೋಣ. ಜನರಿಗೆ ಸೌಲಭ್ಯ ಸಿಗಲಿ ಎಂದರು.
ಪುರಸಭೆ ಮಾಜಿ ಅಧ್ಯಕ್ಷರಾದ ಕೆ.ವಿ. ಶ್ರೀಧರ, ಬಾಬು ಹೋಳದಾರ್, ರಂಗನಾಥ್, ಮುಖಂಡರಾದ ಕೆ.ಪಿ. ಕುಬೇಂದ್ರಪ್ಪ, ಪಾಲಕ್ಷಪ್ಪ, ನೆಲಹೊನ್ನೆ ಮಂಜುನಾಥ್, ಅರಕೆರೆ ನಾಗರಾಜು, ಶಿವಾನಂದ್, ಮಂಜುನಾಥ್ ಇಂಚರ, ಮಹೇಶ್ ಹುಡೇದ್, ಸತೀಶ್, ಪಲ್ಲವಿರಾಜು ಇತರರಿದ್ದರು.