

ಹಾಸನ: ಅರಸೀಕೆರೆ ಗ್ರಾಮಾಂತರದ ಕಸಬಾ ಹೋಬಳಿಯ ಜಾಜೂರು ಗ್ರಾಮದಲ್ಲಿ 5 ದಿನಗಳ ಕಾಲ ನಡೆದ ಗ್ರಾಮ ದೇವತೆ ಹೊನ್ನಾಲದಮ್ಮ ದೇವಿ ಹಾಗೂ ವೀರಭದ್ರೇಶ್ವರ ಸ್ವಾಮಿ ಮತ್ತು ಅಮ್ಮಯ್ಯಜ್ಜಿ ದೇವಿ, ಧೂತರಾಯ ಸ್ವಾಮಿ, ಚಿಕ್ಕಮ್ಮ ದೇವಿಯ ಜಾತ್ರಾ ಮಹೋತ್ಸವವು ಗುರುವಾರ ರಥೋತ್ಸವದೊಂದಿಗೆ ಸಂಪನ್ನಗೊಂಡಿತು.
ಜಾಜೂರು ಸೇರಿದಂತೆ ಸುತ್ತಮುತ್ತಲಿನ ನಾಗತಿಹಳ್ಳಿ, ಹೆಂಜಗೊಂಡನಹಳ್ಳಿ , ಬೈರಗೊಂಡನಹಳ್ಳಿ, ಹೊಸಹಳ್ಳಿ, ಬೆಂಡೇಕೆರೆ, ಕಾಟೀಕೆರೆ, ಗೊಲ್ಲರಹಟ್ಟಿ, ಬಿ.ಜಿ. ತಾಂಡ್ಯ ಗ್ರಾಮಗಳ ಭಕ್ತರು ಹಾಗೂ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಗುರುವಾರ ಬೆಳಿಗ್ಗೆ ಗ್ರಾಮ ದೇವತೆಗಳಾದ ಹೊನ್ನಾಲದಮ್ಮ ದೇವಿ ಹಾಗೂ ಅಮ್ಮಯ್ಯಜ್ಜಿ ದೇವಿಯರನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ರಥಕ್ಕೆ ಪೂಜೆ ಸಲ್ಲಿಸಿ, ಈಡುಗಾಯಿ ಸಮರ್ಪಿಸಿದ ನಂತರ ರಥೋತ್ಸವಕ್ಕೆ ಚಾಲನೆ ದೊರೆಯಿತು, ನೆರೆದಿದ್ದ ಭಕ್ತ ಸಮೂಹ ರಥದ ಕಲಶಕ್ಕೆ ಬಾಳೆಹಣ್ಣು ಮತ್ತು ಧವನವನ್ನು ಎಸೆಯುವ ಮೂಲಕ ತಮ್ಮ ಹರಕೆ ತೀರಿಸಿದರು.
ಬಿಸಿಲಿನ ತಾಪಕ್ಕೆ ದಣಿದ ಭಕ್ತರಿಗೆ ಗ್ರಾಮಸ್ಥರು ಪಾನಕ ಮತ್ತು ಫಲಹಾರ ವಿತರಿಸಿದರು. ರಥೋತ್ಸವದ ನಿಮಿತ್ತ ಗ್ರಾಮದ ದೇವರುಗಳಾದ ರಂಗನಾಥ ಸ್ವಾಮಿ, ಹೊನ್ನಾಲದಮ್ಮ ದೇವಿ, ಅಮ್ಮಯ್ಯಜ್ಜಿ ದೇವಿ, ಧೂತರಾಯ ಸ್ವಾಮಿ, ಚಿಕ್ಕಮ್ಮ ದೇವಿ, ಪ್ಲೇಗಿನಮ್ಮ ದೇವಿ, ಹುತ್ತದಮ್ಮ ದೇವಿ, ಗಂಗಮ್ಮ ದೇವಿ ದೇಗುಲಗಳ ಮೂಲ ಸನ್ನಿಧಿಯಲ್ಲಿ ವಿಶೇಷ ಪೂಜೆ, ಅಭಿಷೇಕ ಹಾಗೂ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.
ವೀರಭದ್ರೇಶ್ವರ ಸ್ವಾಮಿ ಮತ್ತು ಹೊಸ ಪಟ್ಟಣದ ಧೂತರಾಯ ಸ್ವಾಮಿ ದೇವರುಗಳ ಮಣೇವು ಉತ್ಸವ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ನೆರವೇರಿತು. ಈ ಮಣೇವು ಉತ್ಸವವು ಜಾತ್ರಾ ಮಹೋತ್ಸವದ ವಿಶೇಷವಾಗಿದೆ. ರಥೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಸಂಪನ್ನಗೊಂಡ ಬಳಿಕ ಗ್ರಾಮ ದೇವರುಗಳಿಗೆ ಉಯ್ಯಲೋತ್ಸವ ಮತ್ತು ಗಂಗಾಸ್ನಾನ ಪುಣ್ಯಾಹ ನೆರವೇರಿಸಿ ಬಳಿಕ ಉತ್ಸವ ಮೂರ್ತಿಗಳನ್ನು ಗ್ರಾಮದ ದೇಗುಲಕ್ಕೆ ತರಲಾಯಿತು. ಇದರೊಂದಿಗೆ ಏಪ್ರಿಲ್ 28 ರಿಂದ ಮೇ 2 ರವರೆಗೆ ನಡೆದ 5 ದಿನಗಳ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.