

ಮಂಡ್ಯ: ತಾಲೂಕಿನ ಬಸರಾಳು ಗ್ರಾಮದಲ್ಲಿ ಶನಿವಾರ ಗ್ರಾಮದೇವತೆ ಹೊಂಗೆತಾಳು ಪಟ್ಟಲದಮ್ಮ ದೇವಿಯ ಜಾತ್ರೆ ಸಂಭ್ರಮದಿಂದ ನೆರವೇರಿತು.
ಜಾತ್ರೆ ಅಂಗವಾಗಿ ಶುಕ್ರವಾರ ದೇವಿಗೆ ಪಂಚಾಮೃತ ಅಭಿಷೇಕ, ಅರ್ಚನೆ, ನೈವೇದ್ಯ ನೆರವೇರಿತು. ಅಂತೆಯೇ ದೇವಾಲಯವನ್ನು ವಿಶೇಷ ಬಗೆಯ ಹೂವುಗಳು, ಹಣ್ಣು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಿಗೆ ಹೂವಿನ ಅಲಂಕಾರ ಮಾಡಿ ಮಹಾಮಂಗಳಾರತಿ ನೆರವೇರಿಸಲಾಯಿತು. ಗ್ರಾಮದ ಮಧ್ಯಭಾಗದಲ್ಲಿರುವ ಮಠದ ಮನೆಯಿಂದ ಪಟ್ಟಲದಮ್ಮ ದೇವಿಯ ಉತ್ಸವ ಮೂರ್ತಿಯನ್ನು ಅಲಂಕರಿಸಿ ಕೊಂಬು, ಕಹಳೆ, ತಮಟೆ ಮಂಗಳವಾದ್ಯ, ಛತ್ರಿ ಚಾಮರ ಸಹಿತ ಉತ್ಸವ ನಡೆಯಿತು. ಮಹಿಳೆಯರು ಸಾಮೂಹಿಕವಾಗಿ ತುಂಬಿಟ್ಟಿನ ಆರತಿ ಸಮರ್ಪಿಸಿದರು.
ಬಸರಾಳು ಸೇರಿದಂತೆ ಅಕ್ಕಪಕ್ಕದ ಗ್ರಾಮದ ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿ ದೇವರ ದರ್ಶನ ಪಡೆದರು. ಶನಿವಾರ ಮುಂಜಾನೆವರೆಗೂ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಗುಡ್ಡಪ್ಪ ದೇವಸ್ಥಾನದ ಮುಂಭಾಗದಲ್ಲಿ ಆಯೋಜಿಸಿದ ಅಗ್ನಿಕೊಂಡ ಹಾಯುವ ಮೂಲಕ ಜಾತ್ರೆ ಮುಕ್ತಾಯವಾಯಿತು. ಕೊಂಡ ನೋಡಲು ಭಕ್ತರು ಸಾವಿರಾರು ಸಂಖ್ಯೆಯಲ್ಲಿ ದೇವಸ್ಥಾನದ ಬಳಿಗೆ ಆಗಮಿಸಿದ್ದರು. ಹರಕೆ ಹೊತ್ತು ಭಕ್ತರು 101 ಮಡೆ ಸೇವೆ ಸಲ್ಲಿಸಿದರು. ಜಾತ್ರೆ ಪ್ರಯುಕ್ತ ಮಠದ ಮನೆ ಸೇರಿದಂತೆ ಮಂಡ್ಯ-ನಾಗಮಂಗಲ ರಸ್ತೆ, ಮುತ್ತೇಗೆರೆ ರಸ್ತೆಯಿಂದ ದೇವಸ್ಥಾನದವರೆಗೆ ಸುಮಾರು ಎರಡು ಕಿ.ಮೀ ದೂರದವರೆಗೆ ಎರಡು ಬದಿಗಳಲ್ಲೂ ವಿದ್ಯುತ್ ದೀಪದ ಅಲಂಕಾರ ಮಾಡಲಾಗಿತ್ತು.